ಮಂಗಳೂರು: ನಗರದಲ್ಲಿ ನೆಲೆಸಿರುವ ತೀರ್ಥಹಳ್ಳಿ ಮೂಲದ ಯುವತಿಯೊಬ್ಬಳು ವಿಶ್ವದ ಪ್ರತಿಷ್ಠಿತ ಅಮೆರಿಕದ ರೋಲ್ಸ್ ರಾಯ್ಸ್ ಸಂಸ್ಥೆಯಲ್ಲಿ ವರ್ಷಕ್ಕೆ 72 ಲಕ್ಷ ರೂಪಾಯಿ ಸಂಬಳವನ್ನು ಪಡೆಯುವ ಕೆಲಸಕ್ಕೆ ಆಯ್ಕೆ ಆಗುವ ಮೂಲಕ ಎಲ್ಲರನ್ನೂ ಹುಬ್ಬೇರುವಂತೆ ಮಾಡಿದ್ದಾಳೆ.

ನಗರದ ಹೊರವಲಯದ ಸಹ್ಯಾದ್ರಿ ಕಾಲೇಜಿನಲ್ಲಿ ರೊಬೋಟಿಕ್ಸ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿರುವ ರಿತುಪರ್ಣ ಕರ್ನಾಟದಲ್ಲಿಯೇ ಮೊದಲ ಬಾರಿಗೆ ರೋಲ್ಸ್ ರಾಯ್ಸ್ ನ ಸಂಸ್ಥೆಯಲ್ಲಿ ಕೆಲಸ ಗಿಟ್ಟಿಸಿಕೊಂಡ ಹೆಮ್ಮೆಯ ಕನ್ನಡತಿಯಾಗಿದ್ದಾಳೆ.

ರೋಲ್ಸ್ ರಾಯ್ಸ ಕಂಪೆನಿಯಲ್ಲಿ ಈಕೆ ಒಂದಲ್ಲ ಎರಡಲ್ಲ, ಬರೋಬ್ಬರಿ 8 ತಿಂಗಳ ಕಾಲ ತಾಳ್ಮೆಯಿಂದ ಸಂದರ್ಶನ ನೀಡಿ ಕಂಪೆನಿಯ ವಿವಿಧ ಟಾಸ್ಕ್ಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ.

ಇವರ ಚಾಕಚಕ್ಯತೆ ಕಂಡು ಕಂಪನಿಯೇ ನೇರವಾಗಿ ಅಪಾಯಿಂಟ್ಮೆಂಟ್ ಆರ್ಡರ್ ನೀಡಿದೆ.
ಇನ್ನು ಕೆಲವೇ ತಿಂಗಳಲ್ಲಿ ರಿತುಪರ್ಣ ಅಮೆರಿಕಕ್ಕೆ ಹಾರಲಿದ್ದು ರಾಜ್ಯದಲ್ಲಿಯೇ ರೋಲ್ಸ್ ರಾಯ್ಸ್ ನಲ್ಲಿ ಕೆಲಸ ಪಡೆದ ಮೊದಲ ಹೆಣ್ಣು ಮಗಳು ಎಂಬ ಹೆಗ್ಗಳಿಕೆಗೆ ಪಾತ್ರವಾಗುವ ಮೂಲಕ ಯುವ ಜನತೆಗೆ ಮಾದರಿಯಾಗಿದ್ದಾರೆ.

ಮೆಡಿಕಲ್ ಓದಿ ವೈದ್ಯರಾಗಿ ಸೇವೆ ಮಾಡಬೇಕು ಎಂಬ ಗುರಿ ಈಕೆಯದ್ದಾಗಿತ್ತು. ಆದರೆ ನೀಟ್ನಲ್ಲಿ ನಿರೀಕ್ಷಿತ ಅಂಕ ಸಿಗದೇ ನಿರಾಸೆಯಾಗಿತ್ತು.

ಪೋಷಕರ ಪ್ರೋತ್ಸಾಹದ ಬಳಿಕ 2022ರಲ್ಲಿ ರೊಬೋಟಿಕ್ ಆ್ಯಂಡ್ ಆಟೋಮೇಷನ್ ಕೋರ್ಸ್ಗೆ ಸೇರಿದ್ದಾಳೆ.
ಒಲ್ಲದ ಮನಸ್ಸಿನಿಂದ ಕಾಲೇಜಿಗೆ ಹೋದ ರಿತುಪರ್ಣಳ ಬದುಕನ್ನು ಆ ಕೋರ್ಸ್ ಈಗ ಬದಲಾಯಿಸಿ ಬದುಕಿನ ಹೊಸ ಹಾದಿಗೆ ಮುನ್ನುಡಿ ಬರೆದಿದೆ.




