ಮಂಗಳೂರು: ಕಳೆದ ಮೂರು ವರ್ಷಗಳ ಹಿಂದೆಯಷ್ಟೇ ದುರಸ್ತಿ ಮಾಡಲಾಗಿದ್ದ ಶಾಲಾ ಕಟ್ಟಡದ ಮೇಲ್ಛಾವಣಿ ಕುಸಿದು ವಿದ್ಯಾರ್ಥಿಯೊಬ್ಬ ಗಾಯಗೊಂಡಿರುವ ಘಟನೆ ಬಜ್ಪೆಯ ಕೆಂಜಾರುವಿನ ಶ್ರೀ ಮುಖ್ಯಪ್ರಾಣ ಅನುದಾನ ರಹಿತ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಜೂನ್ 30ರಂದು ಸಂಭವಿಸಿದೆ.

ಶಾಲೆಯಲ್ಲಿ ಶಿಕ್ಷಕರು ಪಾಠ ಮಾಡುತ್ತಿದ್ದಾಗ ಜೋರಾಗಿ ಗಾಳಿ ಬಂದಿದ್ದು, ಈ ವೇಳೆ ಒಂದು ಭಾಗದ ಮೇಲ್ಛಾವಣಿ ಕುಸಿದು ಶಾಲೆಯ ಒಳಭಾಗಕ್ಕೆ ಬಿದ್ದಿದೆ. ಪರಿಣಾಮ ಎಲ್‌ಕೆಜಿ ವಿದ್ಯಾರ್ಥಿ ಶೋನಿತ್ (5) ಮೂಗಿಗೆ ಗಾಯವಾಗಿದ್ದು, ತಕ್ಷಣ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
3 ವರ್ಷದ ಹಿಂದೆಯಷ್ಟೇ ಮೇಲ್ಛಾವಣಿಯ ರೀಪು, ಪಕ್ಕಾಸು, ಹಂಚುಗಳನ್ನು ಅಳವಡಿಸಲಾಗಿತ್ತು. ಆದರೆ ಭಾರೀ ಮಳೆಗೆ ದಿಢೀರ್ ಕುಸಿದು ಬಿದ್ದಿದೆ ಎನ್ನಲಾಗಿದೆ.

ಘಟನೆಯ ಬಗ್ಗೆ ಮಾಹಿತಿ ತಿಳಿದು ಶಾಲೆಗೆ ಮುಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಕಾಂಗ್ರೆಸ್ ನಾಯಕ ಮಿಥುನ್ ರೈ ಸೇರಿದಂತೆ ಮಕ್ಕಳ ಪೋಷಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಉಳಿದ ಸುಮಾರು 20 ವಿದ್ಯಾರ್ಥಿಗಳು ಅದೇ ಕೊಠಡಿಯ ಮತ್ತೊಂದು ಪಾರ್ಶ್ವದಲ್ಲಿದ್ದ ಪರಿಣಾಮ ಯಾವುದೇ ತೊಂದರೆಯಾಗಿಲ್ಲ ಎಂದು ತಿಳಿದುಬಂದಿದೆ.




