ಮಂಗಳೂರು: ಕೋಟ್ಯಂತರ ರೂ. ಬೆಲೆ ಬಾಳುವ ಕಾರಿನ ಮೌಲ್ಯ ಕಡಿಮೆ ಮಾಡಿ ಸರಕಾರಕ್ಕೆ ತೆರಿಗೆ ವಂಚಿಸಿದ್ದ ಆರೋಪದಡಿ ಮಂಗಳೂರು ಸಾರಿಗೆ ಇಲಾಖೆಯ ಮೂರು ಮಂದಿ ಸಿಬ್ಬಂದಿಯನ್ನು ಬೆಂಗಳೂರಿನ ಸಾರಿಗೆ ಮತ್ತು ಶಿಸ್ತು ಪ್ರಾಧಿಕಾರ ಅಮಾನತುಗೊಳಿಸಿದೆ.

ಮಂಗಳೂರು ಆರ್‌ಟಿಒ ಪ್ರಥಮ ದರ್ಜೆ ಸಹಾಯಕ ನೀಲಪ್ಪ ಎಚ್, ಕಚೇರಿ ಅಧೀಕ್ಷಕಿ ರೇಖಾ ನಾಯಕ್, ಕೇಂದ್ರ ಸ್ಥಾನೀಯ ಸಹಾಯಕಿ ಸರಸ್ವತಿ ಅಮಾನತುಗೊಂಡ ಅಧಿಕಾರಿಗಳಾಗಿದ್ದಾರೆ.

ಮಂಗಳೂರು ಆರ್‌ಟಿಒ ಕಚೇರಿಯಲ್ಲಿ 1,96,95,000 ರೂ.ಗಳ ಐಷಾರಾಮಿ ಕಾರನ್ನು 32,15,000 ರೂ. ಮೌಲ್ಯಕ್ಕೆ ನಕಲಿ ದಾಖಲೆ ಸೃಷ್ಟಿಸಿ ನೋಂದಣಿ ಮಾಡಿಕೊಳ್ಳಲಾಗಿತ್ತು.

ಈ ನಿಟ್ಟಿನಲ್ಲಿ ಬೆಂಗಳೂರಿನ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರ ಕಚೇರಿಯ ಅಪರ ಸಾರಿಗೆ ಆಯುಕ್ತರು ಭೇಟಿ ನೀಡಿ ತನಿಖೆ ನಡೆಸಿದ್ದರು. ಅದರಂತೆ ಈ ಮೂವರು ಲೋಪ ಎಸಗಿರುವುದು ಕಂಡುಬಂದಿದೆ.
ಈ ಹಿನ್ನೆಲೆ ಮೂವರ ವಿರುದ್ಧದ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
