ಪುತ್ತೂರು: ರಸ್ತೆ ಬದಿಯಲ್ಲಿ ವಿಷ ಸೇವಿಸಿ ಜೀವನ್ಮರಣ ಸ್ಥಿತಿಯಲ್ಲಿ ನರಳಾಡುತ್ತಿದ್ದ ಯುವ ಜೋಡಿಯನ್ನು ಸ್ಥಳೀಯರು ಪತ್ತೆ ಹಚ್ಚಿರುವ ಘಟನೆ ನೆಲ್ಯಾಡಿ ಸಮೀಪದ ಕೊಕ್ಕಡದ ಅರಣ್ಯ ಪ್ರದೇಶದಲ್ಲಿ ಜೂನ್ 22 ರ ರಾತ್ರಿ ನಡೆದಿದೆ.
ಯುವ ಜೋಡಿಯನ್ನು ಬೆಂಗಳೂರಿನ ಯಲಹಂಕ ನಿವಾಸಿಗಳಾದ ಶ್ರೀಶ ಮತ್ತು ಪ್ರಜ್ವಲ್ ಎಂದು ಗುರುತಿಸಲಾಗಿದೆ.

ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಂದಿದ್ದ ಅವರು ರವಿವಾರ ರಾತ್ರಿ ಬಸ್ಸಿನಲ್ಲಿ ಹೊರಟಿದ್ದು, ಕೊಕ್ಕಡದಲ್ಲಿ ಇಳಿದಿದ್ದರು ಎಂದು ತಿಳಿದು ಬಂದಿದೆ.
ವಿಷ ಸೇವಿಸಿ ನರಾಳಾಡುತ್ತಿದ್ದ ಯುವ ಜೋಡಿಯನ್ನು ತಕ್ಷಣವೇ ಸ್ಥಳೀಯರು ಆ್ಯಂಬುಲೆನ್ಸ್ ಮೂಲಕ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದಿದ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ ಎನ್ನುವ ಮಾಹಿತಿ ಲಭಿಸಿದೆ. ಇನ್ನೂ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

