ಬಂಟ್ವಾಳ: ರಾಜ್ಯ ಸರಕಾರವು ಅನುಷ್ಠಾನಗೊಳಿಸುತ್ತಿರುವ ವಿವಿಧ ವಸತಿ ಯೋಜನೆಗಳ ಮೂಲಕ ಗ್ರಾಮ ಪಂಚಾಯತ್ ವಾರು ಮನೆಗಳನ್ನು ಹಂಚುತ್ತಿರುವ ಸಂದರ್ಭದಲ್ಲಿ ಶೇ 15 % ಮೀಸಲಾತಿಯನ್ನು ಅಲ್ಪ ಸಂಖ್ಯಾತರಿಗೆ ನೀಡಿರುವ ರಾಜ್ಯ ಸರಕಾರದ ಕ್ರಮವನ್ನು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಪ್ರಭಾಕರ ಪ್ರಭು ವಿರೋಧ ವ್ಯಕ್ತ ಪಡಿಸಿದ್ದಾರೆ.
ಅವರು ಈ ಬಗ್ಗೆ ಪತ್ರಿಕೆ ಹೇಳಿಕೆ ನೀಡಿದ್ದು ಈಗಾಗಲೇ ಶೇ 10% ಮೀಸಲಾತಿ ನೀಡುವುದರಿಂದಲೇ ಪ್ರತಿ ಗ್ರಾಮ ಪಂಚಾಯತ್ ವಾರು ಮನೆಗಳನ್ನು ಹಂಚಿಕೆ ಮಾಡುವಾಗ ಪ.ಜಾತಿ , ಪ.ಪಂಗಡ ,ಹಿಂದುಳಿದ ವರ್ಗಗಳ ಸಮಾಜಕ್ಕೆ ತುಂಬಾ ಅನ್ಯಾಯವಾಗಿದೆ . ಹಾಗೂ ಕೆಲವೊಂದು ಗ್ರಾ.ಪಂ ಗಳಲ್ಲಿ ಶೇ 10 ರಷ್ಟು ಅಲ್ಪ ಸಂಖ್ಯಾತರಿಗೆ ಮನೆ ಹಂಚಿಕೆ ಮಾಡಲು ಅಲ್ಪ ಸಂಖ್ಯಾತ ಫಲಾನುಭವಿಗಳೇ ಸಿಗದಿರುವ ಪರಿಸ್ಥಿತಿ ಇರುವ ಸಂದರ್ಭದಲ್ಲಿ ಮತ್ತೆ ಶೇ 15 ರಷ್ಟು ಹೆಚ್ಚುವರಿ ಮೀಸಲಾತಿ ನೀಡುವುದರಿಂದ ವಸತಿ ಹಂಚಿಕೆ ಮಾಡುವಾಗ ಶೇ 50ರಷ್ಟು ಪ್ರಮಾಣದಲ್ಲಿ ಹೆಚ್ಚಿನ ಜನಸಂಖ್ಯೆಯಲ್ಲಿರುವ ಹಿಂದುಳಿದ ಜಾತಿ ಸಮುದಾಯಗಳಿಗೆ ಹಾಗೂ ಶೇ 25 ರಷ್ಟು ಜನಸಂಖ್ಯೆ ಇರುವ ಪ.ಜಾತಿ , ಪ.ಪಂಗಡಗಳಿಗೆ ವಸತಿ ಹಂಚಿಕೆಯಲ್ಲಿ ತುಂಬಾ ಅನ್ಯಾಯವಾಗಲಿದೆ ಎಂದು ಸರಕಾರದ ಕ್ರಮವನ್ನು ಖಂಡಿಸಿದ್ದಾರೆ .
