Breaking
21 Mar 2026, Sat

ಜೂ.6 ರಿಂದ 8 : ನವತೇಜಸ್ ಸಂಘಟಿಸುವ 7ನೇ ವರ್ಷದ ಹಲಸು ಹಣ್ಣು ಮೇಳ

ಪುತ್ತೂರು: ನವತೇಜಸ್ ಪುತ್ತೂರು ಸಂಘಟಿಸುವ 7ನೇ ವರ್ಷದ ಹಲಸು-ಹಣ್ಣು ಮೇಳ ಜೂ. 6 ರಿಂದ 8ರ ತನಕ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ನಡೆಯಲಿದೆ ಎಂದು ಪುತ್ತೂರು ನವತೇಜ ಟ್ರಸ್ಟ್ ಅಧ್ಯಕ್ಷ ಅನಂತ ಪ್ರಸಾದ್ ನೈತಡ್ಕಟ್ರಸ್ಟ್ನ ಸುಹಾಸ್ ಮರಿಕೆ, ವೇಣುಗೋಪಾಲ್ ಎಸ್.ಜೆ. ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಅವರು ಮುಳಿಯ ಪ್ರಾಪರ್ಟೀಸ್, ದ್ವಾರಕಾ ಕಾರ್ಪೋರೇಶನ್ ಪ್ರೈ.ಲಿ., ಕ್ಯಾಂಪ್ಕೋ ಮಂಗಳೂರು, ಗ್ರಾಮಜನ್ಯ, ಎಸ್ ಆರ್ ಕೆ. ಲ್ಯಾಡರ್ಸ್, ವಿಜಯ ಸೋಲಾರ್, ಕೊಕನಟ್ ಫಾರ್ಮಲ್ ಪ್ರೊಡ್ಯೂಸರ್ ಪ್ರೈ. ಲಿ., ಪಶುಪತಿ ಇಲೆಕ್ಟ್ರಾನಿಕ್ಸ್, ಹಾಗೂ ರಾಧಾಸ್ ಸಹಯೋಗದಲ್ಲಿ ಹಲಸು ಮೇಳ ನಡೆಯಲಿದೆ ಎಂದು ತಿಳಿಸಿದರು.
ಈಗಾಗಲೇ ಸುಮಾರು 70 ಮಳಿಗೆಗಳಿಗೆ ಮೇಳದಲ್ಲಿ ಅವಕಾಶ ನೀಡಲಾಗಿದೆ. ಈ ಬಾರಿ ವಿಶೇಷವಾಗಿ ಕೊನೆಯ ದಿನದಂದು ಸುಮಾರು 25 ಬಗೆಯ ಹಲಸಿನ ಹಣ್ಣು ಹಾಗೂ ಮಾವಿನ ಹಣ್ಣಿನ ಖಾದ್ಯಗಳನ್ನೊಳಗೊಂಡ ವಿಶೇಷ ಭೋಜನೆ ವ್ಯವಸ್ಥೆ ಮಾಡಲಾಗಿದ್ದು, 250 ಮಂದಿಗೆ ಸವಿಯುವ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.ಈಗಾಗಲೇ ಮರೆತ ಹಾಗೂ ಮರೆವಿನಂಚಿಲ್ಲಿರುವ ಪಾರಂಪರಿಕ ತಿಂಡಿಗಳನ್ನು ಸ್ಥಳದಲ್ಲೇ ತಯಾರಿಸುವ ಯೋಜನೆ ರೂಪಿಸಲಾಗಿದೆ. ಹಲಸಿನ ತಳಿಗಳನ್ನು ಅಭಿವೃದ್ಧಿಪಡಿಸಿದ ಪ್ರಸಿದ್ಧ ನರ್ಸರಿಗಳಿಂದ ಗಿಡಗಳ ಪ್ರದರ್ಶನ ಮತ್ತು ಮಾರಾಟವಿದೆ ಎಂದು ಹೇಳಿದರು.

ಬೆಳಿಗ್ಗೆ 10ಕ್ಕೆ ಮಳಿಗೆಗಳನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಳಿಗೆಗಳನ್ನು ಉದ್ಘಾಟಿಸಲಿದ್ದು, ಕ್ಯಾಂಪ್ಕೋ ನಿರ್ದೇಶಕ ರಾಘವೇಂದ್ರ ಭಟ್ ಕೆದಿಲ, ಕೃಷಿಕ ಮಹದೇವ ಶಾಸ್ತ್ರಿ ಮಣಿಲಾ ಉಪಸ್ಥಿತರಿರುವರು. ಸಂಜೆ 4ಕ್ಕೆ ಮೇಳ ಆರಂಭಗೊಳ್ಳಲಿದ್ದು, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕಾರ್ ಕೊಡ್ಗಿ ನೇತೃತ್ವ ವಹಿಸಲಿದ್ದು,. ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಚಾಲನೆ ನೀಡುವರು. ಅಡಿಕೆ ಪತ್ರಿಕೆ ಸಂಪಾದಕ ಶ್ರೀಪಡ್ರೆ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಶ್ಯಾಮ್ ಜ್ಯುವೆಲ್ಸ್ ಗ್ರೂಪ್’ನ ಕೇಶವ ಪ್ರಸಾದ್ ಮುಳಿಯ, ನಗರಸಭೆ ಆಯುಕ್ತ ಮಧು ಎಸ್. ಮನೋಹರ್ ಉಪಸ್ಥಿತರಿರುವರು.

ಜೂನ್ 6ರಂದು ಸಂಜೆ ಹಲಸಿನ ಕುರಿತಾದ ಕವಿಗೋಷ್ಠಿ ಈ ಬಾರಿಯ ಮೇಳದ ವಿಶೇಷತೆ. ಹಲಸಿನ ಬಳಕೆ, ಬೆಳೆ. ಅದು ಬದುಕಿಗಂಟಿದ ನೆನಪುಗಳನ್ನು ಕಟ್ಟಿಕೊಡುವ ಕವನಗಳ ಪ್ರಸ್ತುತಿ ಗೋಷ್ಠಿಯ ಹೈಲೈಟ್. ಕಸಾಪ ಪುತ್ತೂರು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅಧ್ಯಕ್ಷತೆ ವಹಿಸುವರು. ಉಮಾಶಂಕರಿ ಎ.ಪಿ. ಮರಿಕೆ ಸಂಯೋಜನೆ ಮಾಡಲಿದ್ದಾರೆ.ಜೂನ್ 7ರಂದು ಬೆಳಿಗ್ಗೆ 11ಕ್ಕೆ ಹಣ್ಣುಗಳೊಂದಿಗೆ ಕಾರ್ಯಕ್ರಮ ನಡೆಯಲಿದೆ.

ಜೂನ್ 7ರಂದು ಸಂಜೆ ಹಲಸಿನ ಅರಿವಿನ ಹರಿವಿನ ಸುತ್ತ ಹೆಣೆದ ಯಕ್ಷಗಾನ ತಾಳಮದ್ದಳೆ ಪನಸೋಪಾಖ್ಯಾನ ಪ್ರಸ್ತುತಿಗೊಳ್ಳಲಿದೆ. ಮೇಳಕ್ಕೆಂದೇ ಸಿದ್ಧಪಡಿಸಲಾದ ಹೊಚ್ಚಹೊಸ ಪ್ರಸಂಗ ಜಿಲ್ಲೆಯ ಪ್ರಸಿದ್ದ ಕಲಾವಿದರು ಭಾಗವಹಿಸಲಿದ್ದಾರೆ. ಸುಮಾರು ಎರಡೂವರೆ ಮೂರು ಗಂಟೆಗಳ ಕಾಲ ತಾಳಮದ್ದಳೆ ನಡೆಯಲಿದೆ. ಮೇಳದಲ್ಲಿ ಸೊಳೆ ರೊಟ್ಟಿ, ಕೇಕ್, ಹಲ್ವ, ಅತಿರಸ, ದೋಸೆ, ಸೇಮಿಗೆ, ಬನ್ಸ್, ಪಲಾವ್, ಪಾಯಸ, ಸೋಂಟೆ, ಕೊಟ್ಟಿಗೆ, ಗೆಣಸಲೆ, ಪೋಡಿ, ಮಾಂಬಳ, ಹಣ್ಣಿನ ಐಸ್ಕ್ರೀಂ.. ಹೀಗೆ ಹತ್ತಾರು ಬಗೆಯನ್ನು ಸವಿಯಲು ಅವಕಾಶ, ಹಲಸಿನ ಹಣ್ಣಿನ ಮಳಿಗೆಯಿದೆ.

ಹಲಸಿನ ಬೀಜದ ಹೋಳಿಗೆ, ಹಣ್ಣಿನ ಹೋಳಿಗೆಗಳು ಲಭ್ಯ. ಈ ಋತುವಿನಲ್ಲಿ ಸಿಗುವ ರಂಬುಟಾನ್, ಡ್ರಾಗನ್, ಮ್ಯಾಂಗೋಸ್ಟಿನ್, ಬೆಣ್ಣೆಹಣ್ಣು ಮೊದಲಾದ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟ, ವಿಶೇಷ ಆಹಾರ ಮಳಿಗೆ, ಆಗ್ರಿ ಬ್ಯುಸಿನೆಸ್ ಮಳಿಗೆಗಳು, ಹಲಸು ಕೃಷಿಕರ ಅನುಭವದ ಮಾತುಗಳು, ಹೊಸ ಹೊಸ ತಳಿಗಳ ಪರಿಚಯ. ಹೀಗೆ ಹಲಸು ಮೇಳದಲ್ಲಿ ವಿವಿಧ ವೈವಿಧ್ಯಗಳು, ವಿದ್ಯಾರ್ಥಿಗಳಿಗೆ ಹಲಸಿನ ಅರಿವನ್ನು ಮೂಡಿಸುವ ಉದ್ದೇಶದಿಂದ ಚಿತ್ರಬಿಡಿಸುವ, ಕವನ ರಚಿಸುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.ಹಲಸಿನ ಹಣ್ಣಿನ ಸೊಳೆಯನ್ನು ತಿನ್ನುವ ಸ್ಪರ್ಧೆಯಿದೆ.

ಜೂನ್ 8ರಂದು ಸಂಜೆ 4ಕ್ಕೆ ಸಮಾರೋಪ ನಡೆಯಲಿದ್ದು ಸಂಸದ ಕ್ಯಾ. ಬ್ರಿಜೇಶ್ ಚೌಟ ನೇತೃತ್ವ ವಹಿಸಲಿದ್ದಾರೆ. ಉಪ್ಪಿನಂಗಡಿ ಬಳ್ಳಿ ಆಯುರ್ ಗ್ರಾಮದ ಮುಖ್ಯವೈದ್ಯ ಡಾ. ಸುಪ್ರೀತ್ ಲೋಬೋ ಸಮಾರೋಪ ಮಾತುಗಳನ್ನಾಡಲಿದ್ದಾರೆ. ಸುದಾನ ಶಿಕ್ಷಣ ಸಂಸ್ಥೆಗಳ ರೆ. ವಿಜಯ್ ಹಾರ್ವಿನ್, ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷೆ ಅಶ್ವಿನಿ ಕೃಷ್ಣ ಮುಳಿಯ, ಜೆಸಿಐ ವಲಯ 15ರ ಜೆ ಕ್ಯಾಮ್ ಚೇರ್ಮನ್ ಧೀರಜ್ ಬಿ. ಉದ್ಯಾವರ ಅತಿಥಿಗಳಾ ಪಾಲ್ಗೊಳ್ಳಲಿರುವರು ಎಂದು ಅವರು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೋಟರಿ ಕ್ಲಬ್ ಪುತ್ತೂರು ಯುವದ ನಿಯೋಜಿತ ಅಧ್ಯಕ್ಷ ಕುಸುಮಾಧರ್, ಜೇಕಾಮ್ ಪುತ್ತೂರು ಟೇಬಲ್ 1.0 ಚೇರ್ಮೆನ್ ಪಶುಪತಿ ಶರ್ಮಾ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *