ಮಂಗಳೂರು: ನಗರದ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಸಮೀಪದ ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದ ಇಬ್ಬರು ಆರೋಪಿಗಳಿಗೆ ಇಂದು ಜಾಮೀನು ಮಂಜೂರು ಮಾಡಲಾಗಿದೆ.

ಪ್ರಕರಣದ 10ನೇ ಆರೋಪಿ ರಾಹುಲ್ ಮತ್ತು 20ನೇ ಆರೋಪಿ ಸುಶಾಂತ್‌ಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಜಾಮೀನು ನೀಡಿದೆ.
ಇಬ್ಬರು ಆರೋಪಿಗಳ ಹೆಸರು ಎಫ್‌ಐಆರ್‌ನಲ್ಲಿ ಉಲ್ಲೇಖವಿಲ್ಲ ಎಂಬ ಕಾರಣವನ್ನು ನೀಡಿ ಜಾಮೀನು ಕೋರಲಾಗಿತ್ತು ಎಂದು ತಿಳಿದು ಬಂದಿದೆ.

ಏಪ್ರಿಲ್ 27ರಂದು ಸಂಜೆ ಕುಡುಪು ಭಟ್ರಕಲ್ಲುರ್ಟಿ ದೈವಸ್ಥಾನದ ಸಮೀಪದ ಮೈದಾನದಲ್ಲಿ ಕ್ರಿಕೆಟ್ ಪಂದ್ಯದ ಸಂದರ್ಭದಲ್ಲಿ ವ್ಯಕ್ತಿಯೊಬ್ಬನ ಮೇಲೆ ಗುಂಪು ಹಲ್ಲೆ ಮಾಡಿ ಕೊಲೆಮಾಡಲಾಗಿತ್ತು.
ಈ ಸಂದರ್ಭ ಕೊಲೆಯಾದ ವ್ಯಕ್ತಿ ವಯನಾಡ್‌ನ ಅಶ್ರಫ್ ಎಂದು ಏ. 29ರಂದು ಸಂಜೆ ಖಚಿತವಾಗಿತ್ತು. 30ರಂದು ಅಶ್ರಫ್ ಕುಟುಂಬದ ಮೂಲ, ಮಲಪ್ಪುರಂ ಜಿಲ್ಲೆಯ ಕೋಟ್ಟಕ್ಕಲ್ ಪರಪ್ಪೂರ್ ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು.
ಅಂದಿನಿಂದ ಅಶ್ರಫ್‌ಗೆ ನ್ಯಾಯ ಸಿಗಬೇಕು ಮತ್ತು ಅವರ ಕುಟುಂಬಕ್ಕೆ ಪರಿಹಾರ ನೀಡಬೇಕೆಂಬ ಕೂಗು ಎದ್ದಿತ್ತು.
