ವಿಟ್ಲ: ರಸ್ತೆ ಬದಿ ನಿಲ್ಲಿಸಿದ್ದ ಮಣ್ಣು ಸಾಗಾಟದ ಲಾರಿಗೆ ಹಿಂಬದಿಯಿಂದ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು, ಸಹ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ವಿಟ್ಲ ಸಮೀಪದ ಮಂಗಳಪದವು ಎಂಬಲ್ಲಿ ನಡೆದಿದೆ.

ಒಕ್ಕೆತ್ತೂರು ನಿವಾಸಿ ಇಸ್ಮಾಯೀಲ್ ಎಂಬವರ ಪುತ್ರ ಇರ್ಫಾನ್ (19) ಎಂದು ಮೃತದುರ್ದೈವಿಯಾಗಿದ್ದು, ಸಹಸವಾರ ಫಾರಿಸ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಗುರುವಾರ ರಾತ್ರಿ ಇರ್ಫಾನ್ ಮತ್ತು ಫಾರಿಸ್ ಬೈಕಿನಲ್ಲಿ ಮಂಗಳಪದವು ಕಡೆಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕನ್ಯಾನ ಕಡೆಯಿಂದ ಬಾಕ್ಸೈಟ್ ಮಣ್ಣು ಸಾಗಾಟ ಮಾಡುತ್ತಿದ್ದ ಲಾರಿಯನ್ನು ಅದರ ಚಾಲಕ ರಸ್ತೆಯಲ್ಲೇ ನಿಲ್ಲಿಸಿದ್ದಾನೆ ಎನ್ನಲಾಗಿದೆ. ಇದನ್ನು ಗಮನಿಸದೆ ಬೈಕ್ ಅದಕ್ಕೆ ಢಿಕ್ಕಿ ಹೊಡೆದಿದ್ದು ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಬೈಕ್ ಸವಾರರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಇರ್ಫಾನ್ ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಲಾರಿ ಚಾಲಕ ಬೇಜವಾಬ್ದಾರಿತನದಿಂದ ರಸ್ತೆಯಲ್ಲೇ ಲಾರಿ ನಿಲ್ಲಿಸಿ ಚಹಾ ಕುಡಿಯಲು ಹೋಟೆಲ್ ಗೆ ತೆರಳಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
