ಮಂಗಳೂರು: ಬಂಟ್ವಾಳ ತಾಲೂಕಿನ ಕುರಿಯಾಲ್ ಗ್ರಾಮದ ಇರಕೋಡಿಯಲ್ಲಿ ಮೇ 27ರಂದು ನಡೆದ ಅಬ್ದುಲ್ ರಹಿಮಾನ್ ಕೊಲೆ ಮತ್ತು ಕಲಂದರ್ ಶಾಫಿ ಮೇಲೆ ನಡೆದ ಭೀಕರ ಹಲ್ಲೆ ಪ್ರಕರಣ ತನಿಖೆ ತೀವ್ರಗೊಂಡಿದ್ದು, ಶುಕ್ರವಾರ ಇನ್ನಿಬ್ಬರನ್ನು ಪೊಲೀಸರು ಬಂಧಿಸಿದ್ದು ಈ ಮೂಲಕ ಬಂಧಿತರ ಸಂಖ್ಯೆ 5ಕ್ಕೆ ಏರಿಯಾಗಿದೆ.

ಪ್ರಕರಣಕ್ಕೆ ಸಂಬಂಧಿಸಿ ಬಂಟ್ವಾಳ ತೆಂಕಬೆಳ್ಳೂರು ಗ್ರಾಮದ ಸುಮಿತ್ ಆಚಾರ್ಯ (27) ಮತ್ತು ಬಂಟ್ವಾಳ ಬಡಗಬೆಳ್ಳೂರು ಗ್ರಾಮದ ರವಿರಾಜ್ (23) ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ತನಿಖೆ ಮುಂದುವರೆದಿದ್ದು, ಅದರ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 15 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಇತರ ಆರೋಪಿಗಳ ಪತ್ತೆಗಾಗಿ ಹುಡುಕಾಟ ಮುಂದುವರೆದಿದೆ.
