ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಣಿ ಹತ್ಯೆಗಳು ನಡೆದ ಬೆನ್ನಲ್ಲೇ ಇದೀಗ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಅವರನ್ನು ರಾಜ್ಯ ಸರಕಾರ ಎತ್ತಂಗಡಿ ಮಾಡಿದೆ.

ಇದರ ಜೊತೆಗೆ ದಕ್ಷಿಣಕನ್ನಡ ಜಿಲ್ಲೆಯ ಎಸ್ಪಿ ಯತೀಶ್ ಅವರನ್ನೂ ವರ್ಗಾವಣೆ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.ಜಿಲ್ಲೆಯಲ್ಲಿ ನಡೆಯುತ್ತಿರುವ ಸರಣಿ ಹತ್ಯೆಗಳ ಬೆನ್ನಲ್ಲೇ ಇದೀಗ ರಾಜ್ಯ ಸರಕಾರ ನಿರೀಕ್ಷೆಯಂತೆ ಪೊಲೀಸ್ ಅಧಿಕಾರಿಗಳ ವರ್ಗಾವಣೆ ಮಾಡಿದೆ.
ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರವಾಲ್ ಅವರನ್ನು ವರ್ಗಾವಣೆ ಮಾಡಿ ಅವರ ಜಾಗಕ್ಕೆ ಈ ಹಿಂದೆ ಮಂಗಳೂರಿನಲ್ಲಿ ಎಸ್ಪಿ ಆಗಿ ಕರ್ತವ್ಯ ನಿರ್ವಹಿಸಿದ್ದ ಸುಧೀರ್ ಕುಮಾರ್ ರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ.
ಅನುಪಮ್ ಅಗರ್ವಾಲ್ ಅವರನ್ನು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಭಾಗಕ್ಕೆ ಡಿಐಜಿ ಆಗಿ ವರ್ಗಾವಣೆ ಮಾಡಲಾಗಿದೆ. ಅಲ್ಲದೆ, ದಕ್ಷಿಣ ಕನ್ನಡ ಎಸ್ಪಿ ಯತೀಶ್ ಅವರನ್ನೂ ವರ್ಗಾವಣೆ ಮಾಡಲಾಗಿದ್ದು, ಅವರಿಗೆ ಜಾಗ ತೋರಿಸಿಲ್ಲ.

ದಕ್ಷಿಣ ಕನ್ನಡ ಎಸ್ಪಿ ಜಾಗಕ್ಕೆ ಉಡುಪಿಯಲ್ಲಿ ಎಸ್ಪಿಯಾಗಿ ದಕ್ಷ ಅಧಿಕಾರಿಯೆಂದು ಹೆಸರು ಮಾಡಿರುವ ಡಾ.ಅರುಣ್ ಕೆ. ಅವರನ್ನು ನೇಮಕ ಮಾಡಲಾಗಿದೆ. ಉಡುಪಿ ಎಸ್ಪಿ ಹುದ್ದೆಗೆ ಮಂಗಳೂರಿನಲ್ಲಿ ಈ ಹಿಂದೆ ಡಿಸಿಪಿಯಾಗಿ ದಕ್ಷತೆಯಿಂದ ಕೆಲಸ ಮಾಡಿದ್ದ ಹರಿರಾಮ್ ಶಂಕರ್ ಅವರನ್ನು ನೇಮಿಸಲಾಗಿದೆ.
ಹರಿರಾಮ್ ಶಂಕರ್ ಬೆಂಗಳೂರಿನಲ್ಲಿ ಇಂಟೆಲಿಜೆನ್ಸ್ ವಿಭಾಗದಲ್ಲಿ ಎಸ್ಪಿ ಆಗಿದ್ದರು.ಅನುಪಮ್ ಅಗರ್ವಾಲ್ ಕಾರ್ಯಶೈಲಿ ಬಗ್ಗೆ ಬಹಳಷ್ಟು ಆರೋಪಗಳಿದ್ದವು. ಜನಪರವಾಗಿಲ್ಲ, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆಂಬ ವಿಚಾರದಲ್ಲಿ ಬಹಿರಂಗವಾಗಿಯೇ ಕಮ್ಯುನಿಸ್ಟ್ ನಾಯಕರು ಆರೋಪ ಮಾಡಿದ್ದರು.

ಈ ಬಗ್ಗೆ ಪ್ರತಿಭಟನೆ ಎಲ್ಲ ನಡೆದರೂ, ಸ್ಪೀಕರ್ ಯುಟಿ ಖಾದರ್ ಮತ್ತು ಇವರ ತಂಡವು ಕಮಿಷನರ್ ಪರವಾಗಿ ನಿಂತಿದ್ದರಿಂದ ವರ್ಗಾವಣೆ ಆಗಿರಲಿಲ್ಲ.ಇತ್ತೀಚೆಗೆ ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಸಂದರ್ಭದಲ್ಲಿ ಬಿಜೆಪಿ ನಾಯಕರೂ ಆರೋಪ ಮಾಡಿದ್ದರು.
ಕುಡುಪು ಗುಂಪು ಹತ್ಯೆ ಮತ್ತು ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎರಡರಲ್ಲೂ ಎಡವಟ್ಟು ಮಾಡಿಕೊಂಡಿದ್ದರು. ಮಾಧ್ಯಮಕ್ಕೆ ಮಾಹಿತಿ ನೀಡುವುದರಲ್ಲೂ ಸ್ಪಷ್ಟತೆ ಇರಲಿಲ್ಲ. ಇದೀಗ ಮತ್ತೊಂದು ಕೊಲೆ ನಡೆಯುವುದರೊಂದಿಗೆ ಸ್ಪೀಕರ್ ಖಾದರ್ ಅನುಪಸ್ಥಿತಿಯಲ್ಲೇ ಅನುಪಮ್ ಅಗರ್ವಾಲ್ ಅವರನ್ನು ನೇರವಾಗಿ ಎತ್ತಂಗಡಿ ಮಾಡಲಾಗಿದೆ.
