ಬಂಟ್ವಾಳ: ಕುರಿಯಾಳ ಗ್ರಾಮದ ಈರಾಕೋಡಿ ಎಂಬಲ್ಲಿ ಕೊಳತ್ತಮಜಲವಿನ ನಿವಾಸಿ ಪಿಕಪ್ ಚಾಲಕ ಅಬ್ದುಲ್ ರಹಿಮಾನ್ ( 32) ಹತ್ಯೆ ಮತ್ತು ಕಲಂದರ್ ಶಾಫಿ ಮೇಲಿನ ಕೊಲೆಯತ್ನ ಪ್ರಕರಣ ಸಂಬಂಧ ಸ್ಥಳೀಯ ಇಬ್ಬರು ಸೇರಿ 15 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ದೀಪಕ್ ಮತ್ತು ಸುಮಿತ್ ಸೇರಿ ಒಟ್ಟು 15 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ದೀಪಕ್ ಮತ್ತು ಸುಮಿತ್ ಕೊಲೆಯಾದ ಅಬ್ದುಲ್ ರಹಿಮಾನ್ ಮತ್ತು ಕಲಂದರ್ ಶಾಫಿ ಅವರಿಗೆ ಪರಿಚಯಸ್ಥರೇ ಆಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಘಟನೆ ನಡೆದ ಬಳಿಕ ಗಾಯಾಳು ಕಲಂದರ್ ಶಾಫಿ ಅವರನ್ನು ಆಂಬ್ಯುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭ ಮುಹಮ್ಮದ್ ನಿಸಾರ್ ಎಂಬವರಲ್ಲಿ ಮಾಹಿತಿ ನೀಡಿದ್ದು, ನಾನು ಮತ್ತು ಅಬ್ದುಲ್ ರಹಿಮಾನ್ ಹೊಳೆ ಬದಿಯಿಂದ ಪಿಕ್ ಅಪ್ ವಾಹನದಲ್ಲಿ ಮರಳು ಲೋಡ್ ಮಾಡಿ ಕುರಿಯಾಳ ಗ್ರಾಮದ ಈರಾ ಕೋಡಿಯ ರಾಜೀವಿ ಎಂಬವರ ಮನೆ ಬಳಿ ಇಳಿಸುವ ಸಮಯ ಪರಿಚಯಸ್ಥರಾದ ದೀಪಕ್, ಸುಮಿತ್ ಸೇರಿದಂತೆ 15 ಮಂದಿ ಏಕಾಏಕಿ ಚಾಲಕನ ಸೀಟಿನಲ್ಲಿದ್ದ ಅಬ್ದುಲ್ ರಹಿಮಾನ್ ಅವರನ್ನು ಹೊರಗೆ ಎಳೆದು ತಲವಾರು, ಚೂರಿ, ರಾಡ್ ಗಳೊಂದಿಗೆ ಯದ್ವಾ- ತದ್ಬಾ ತಿವಿದು, ಕಡಿದ್ದಾರೆ. ಆಗ ಪಕ್ಕದಲ್ಲಿದ್ದ ನಾನು ತಡೆಯಲು ಹೋದಾಗ ನನಗೆ ಚೂರಿಯಿಂದ, ಎದೆಗೆ, ಬೆನ್ನಿಗೆ, ಕೈಗೆ, ತಿವಿದು ತಲವಾರ್ ನಿಂದ ಕಡಿದಿದ್ದಾರೆ. ಈ ವೇಳೆ ಅಲ್ಲಿದ್ದವರು ಬೊಬ್ಬೆ ಹಾಕಿದ್ದರಿಂದ ಹಲ್ಲೆ ಮಾಡಿದ ಆರೋಪಿಗಳು ಮಾರಕಾಸ್ತ್ರಗಳೊಂದಿಗೆ ಪರಾರಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಮೃತ ಅಬ್ದುಲ್ ರಹಿಮಾನ್ ಅವರು ಕೊಳ್ತಮಜಲು ಜುಮ್ಮಾ ಮಸೀದಿಯ ಕಾರ್ಯದರ್ಶಿಯಾಗಿದ್ದರು. ಅಲ್ಲದೆ ಊರಿನ ಜನರೊಂದಿಗೆ ಉತ್ತಮ ಅಭಿಪ್ರಾಯ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.
ತೀವ್ರವಾಗಿ ಗಾಯಗೊಂಡ ಕಲಂದರ್ ಶಾಫಿ ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು.
ದುಷ್ಕರ್ಮಿಗಳ ಗುಂಪು ಕೋಮು ಭಾವನೆಯಿಂದ ಅಥವಾ ಇನ್ನಾವುದೋ ಕಾರಣಕ್ಕೆ ಅಬ್ದುಲ್ ರಹಿಮಾನ್ ಅವರನ್ನು ಕೊಲೆಗೈದು, ಕಲಂದರ್ ಶಾಫಿ ಅವರನ್ನು ತೀವ್ರವಾಗಿ ಗಾಯಗೊಳಿಸಿ ಕೊಲೆ ಪ್ರಯತ್ನ ಮಾಡಿದ್ದಾರೆ. ಈ ಕೃತ್ಯದಲ್ಲಿ ಪರಿಚಯಸ್ಥರಾದ ದೀಪಕ್, ಸುಮಿತ್ ಮತ್ತು ಇತರರು ಭಾಗಿಯಾಗಿದ್ದಾರೆ ಎಂದು ದೂರುದಾರ ಮುಹಮ್ಮದ್ ನಿಸಾರ್ ಅವರು ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ಬೇಧಿಸಲು 5 ಪೊಲೀಸ್ ತಂಡ
ಘಟನಾ ಸಂಬಂಧ ಆರೋಪಿಗಳ ಬಂಧನಕ್ಕಾಗಿ ಡಿವೈಎಸ್ಪಿ ವಿಜಯ ಪ್ರಕಾಶ್ ನೇತೃತ್ವದಲ್ಲಿ 5 ಪೊಲೀಸ್ ತಂಡಗಳು ರಚಿಸಲಾಗಿದೆ.
ಸದ್ಯ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ.



