Breaking
20 Sep 2026, Sun

ಸರ್ವಪಕ್ಷ ನಿಯೋಗದಲ್ಲಿ ಸಂಸದ ಕ್ಯಾ.ಬ್ರಿಜೇಶ್ ಚೌಟ : “ಪಾಕಿಸ್ತಾನದ ಮುಖವಾಡವನ್ನು ಜಗತ್ತಿನ ಮುಂದೆ ತೋರಿಸಲು ಉತ್ಸುಕನಾಗಿದ್ದೇನೆ”

ಮಂಗಳೂರು: ಪಾಕಿಸ್ತಾನದ ಭಯೋತ್ಪಾದನೆ ಕುರಿತಂತೆ ಇಡೀ ವಿಶ್ವಕ್ಕೆ ತಿಳಿಸುವ ಹಿನ್ನಲೆ ಪ್ರಧಾನಿ ಮೋದಿಯವರು ರಚಿಸಿರುವ ಸರ್ವಪಕ್ಷ ನಿಯೋಗದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ.ಬ್ರಿಜೇಶ್ ಚೌಟ ಸ್ಥಾನಪಡೆದಿದ್ದಾರೆ.

ಈ ನಿಯೋಗದಲ್ಲಿ ವಿವಿಧ ಪಕ್ಷಗಳ ಒಟ್ಟು 51 ರಾಜಕೀಯ ನಾಯಕರು, ಸಂಸದರು, ಮಾಜಿ ಸಚಿವರು ಮತ್ತು 8 ಮಾಜಿ ರಾಯಭಾರಿಗಳಿದ್ದು, ಇವರು ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ ಮತ್ತು ಅದನ್ನು ಭಾರತ ಎದುರಿಸುತ್ತಿರುವ ರೀತಿಯನ್ನು ಜಾಗತಿಕ ವೇದಿಕೆಗೆ ಪರಿಣಾಮಕಾರಿಯಾಗಿ ಮನದಟ್ಟು ಮಾಡಿಕೊಡಲಿದ್ದಾರೆ. ಮೇ 23ರಿಂದ ಡಿಎಂಕೆ ಸಂಸದೆ ಕನಿಮೋಳಿ ನೇತೃತ್ವದ ಎಂಟು ಮಂದಿ ಸಂಸದರ ನಿಯೋಗವು ರಷ್ಯಾ, ಸ್ಪೇನ್, ಗ್ರೀಸ್, ಸ್ಟೋವೇನಿಯಾ, ಲಾಟ್ವಿಯಾ ದೇಶಗಳಿಗೆ ಭೇಟಿ ನೀಡಲಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕ್ಯಾ. ಬ್ರಿಜೇಶ್ ಚೌಟ, ‘ಜಾಗತಿಕ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಸಿಕ್ಕಿರುವ ಈ ಪ್ರಪ್ರಥಮ ಅವಕಾಶವು ನನ್ನ ಪಾಲಿಗೆ ಶ್ರೇಷ್ಠವಾದುದು. ಪಾಕಿಸ್ತಾನದ ಮುಖವಾಡವನ್ನು ಜಗತ್ತಿನ ಮುಂದೆ ತೋರಿಸಲು ಉತ್ಸುಕನಾಗಿದ್ದೇನೆ. ಹೇಡಿತನದ ಭಯೋತ್ಪಾದಕ ದಾಳಿಗೆ ಆಪರೇಷನ್ ಸಿಂಧೂರ ಮೂಲಕ ಪ್ರತೀಕಾರ ತೀರಿಸಿಕೊಂಡ ರೀತಿಯ ಬಗ್ಗೆ ಒಬ್ಬ ಯೋಧನಾಗಿ ನನಗೆ ಅಪಾರ ಹೆಮ್ಮೆಯಿದೆ. ಈ ಎಲ್ಲದರ ಹಿಂದಿನ ಶಕ್ತಿಯಾಗಿರುವ ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನದ ಮತ್ತು ಧ್ಯೇಯದ ಧ್ವನಿಯಾಗಲು ಈ ನಿಯೋಗದ ಭಾಗವಾಗಿ ಅವಕಾಶ ನೀಡಿದ್ದಕ್ಕಾಗಿ ನಾನು ಹೃತ್ತೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದು ತಿಳಿಸಿದ್ದಾರೆ.

‘ಭಯೋತ್ಪಾದನೆಯ ವಿರುದ್ಧ ಭಾರತದ ಶೂನ್ಯ-ಸಹಿಷ್ಣುತೆಯ ಸಂದೇಶ ಸಾರಲು ಮತ್ತು ನವಭಾರತವು ಯಾವ ರೀತಿ ಭಿನ್ನವಾಗಿದೆ ಹಾಗೂ ತನ್ನ ನಿಲುವಿಗೆ ಹೇಗೆ ಬದ್ಧವಾಗಿದೆ ಎಂಬುದನ್ನು ಜಗತ್ತಿಗೆ ಹಂಚಿಕೊಳ್ಳಲು ನಾನು ಈ ವೇದಿಕೆಯನ್ನು ಬಳಸಿಕೊಳ್ಳಲಿದ್ದೇನೆ’ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *