Breaking
9 May 2026, Sat

“ಸೇತುವೆ ನಿರ್ಮಾಣದ ಕ್ರೆಡಿಟ್‌ ನನಗೆ ಬೇಡ: ಶೀಘ್ರದಲ್ಲಿ ಕಾಮಗಾರಿ ಮುಗಿಸಿ”: ಅಧಿಕಾರಿಗಳಿಗೆಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಖಡಕ್‌ ಸೂಚನೆ

ಬಂಟ್ವಾಳ: ಅಜಿಲಮೊಗರು ಕಡೇಶ್ವಾಲ್ಯ ಸೇತುವೆ ಕಾಮಗಾರಿ ವಿಳಂಭವಾಗುತ್ತಿರುವ ಹಿನ್ನಲೆ ಸಂಬಂಧಪಟ್ಟ ಅಧಿಕಾರಿಗಳನ್ನು ತಮ್ಮ ಕಛೇರಿಗೆ ಕರೆಸಿಕೊಂಡು ಸಭೆ ನಡೆಸಿದ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಗುತ್ತು ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದ್ದಾರೆ.

ಸೇತುವೆಯ ಕುರಿತು ಯಾವುದೇ ರೀತಿಯ ಕ್ರೆಡಿಟ್ ನನಗೆ ಬೇಡ, ಆದರೆ ಜನರಿಗೆ ಅನುಕೂಲವಾಗುವ ರೀತಿ ಸೇತುವೆ ಕಾಮಗಾರಿ ಪೂರ್ಣಗೊಳ್ಳಬೇಕು. ಅಧಿಕಾರಿಗಳು ವಿಳಂಬ ನೀತಿಯನ್ನು ಬಿಟ್ಟು ಮುಂದಿನ ಬೇಸಿಗೆಯೊಳಗೆ ಕಾಮಗಾರಿಯನ್ನು ಸಂಪೂರ್ಣಗೊಳಿಸಬೇಕು.

ಹಾಗೆಯೇ ಸೇತುವೆಗೆ ಸಂಬಂಧಿಸಿ ಶಾಸಕರ ಗಮನಕ್ಕೆ ತಾರದೆ ಹಕ್ಕುಚ್ಯುತಿ ಮಾಡಿರುವ ಕುರಿತು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರೆ ಅಧಿಕಾರಿಗಳೇ ಹೊಣೆಯಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಸೇತುವೆಯ ಬಾಕಿಯಾಗಿರುವ ಎರಡು ಪಿಲ್ಲರ್‌ಗಳಿಗೆ ಸಂಬಂಧಿಸಿ ಕಡತ ಕೆಆರ್‌ಡಿಸಿಎಲ್‌ಗೆ ಹೋಗಿರುವುದಾಗಿ ಕಾರ್ಯನಿರ್ವಾಹಕ ಎಂಜಿನಿಯರ್ ರಘು ಅವರು ಪ್ರಸ್ತಾಪಿಸಿದಾಗ ಶಾಸಕರು ದೂರವಾಣಿ ಮೂಲಕ ಚೀಫ್ ಎಂಜಿನಿಯರ್ ವಸಂತ ನಾಯ್ಕ್ ಅವರನ್ನು ಸಂಪರ್ಕಿಸಿ, ಶೀಘ್ರ ಅನುಮೋದನೆ ನೀಡುವಂತೆ ಸೂಚಿಸಿದರು.

ಹಿಂದಿನ ಸರಕಾರದ ಅವಧಿಯಲ್ಲಿ ಈ ವಿಚಾರವನ್ನು ನನ್ನ ಗಮನಕ್ಕೆ ತಂದಿದ್ದರೆ ಆಗಲೇ ಸಂಬಂಧಪಟ್ಟ ಸಚಿವರ ಜತೆ ಮಾತನಾಡಿ ಸಮಸ್ಯೆ ಬಗೆಹರಿಸುತ್ತಿದ್ದೆ ಎಂದು ಹೇಳಿದರು.

ಸಭೆಯಲ್ಲಿ ವಿವಿಧ ಸಮಸ್ಯೆಗಳ ಕುರಿತು ರೈತ ಸಂಘದ ಮುಂದಾಳು ಸರಪಾಡಿ ಅಶೋಕ ಶೆಟ್ಟಿ, ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಸರಪಾಡಿ ಗ್ರಾ.ಪಂ.ಸದಸ್ಯ ಧನಂಜಯ ಶೆಟ್ಟಿ ನಾಡಬೆಟ್ಟು, ಸ್ಥಳೀಯ ಮುಂದಾಳು ಶಶಿಕಾಂತ ಶೆಟ್ಟಿ ಆರುಮುಡಿ, ಮಣಿನಾಲ್ಕೂರು ಗ್ರಾ.ಪಂ.ಸದಸ್ಯ ಸಾಂತಪ್ಪ ಪೂಜಾರಿ ಹಟ್ಟದಡ್ಕ, ಮಣಿನಾಲ್ಕೂರು ಸಿಎ ಬ್ಯಾಂಕ್ ನಿರ್ದೇಶಕ ಪೂವಪ್ಪ ಪೂಜಾರಿ ಕಡಮಾಜೆ ಪ್ರಸ್ತಾಪಿಸಿದರು.

ಜಿಲ್ಲಾ ಪಂಚಾಯತ್‌ ಮಾಜಿ ಸದಸ್ಯ ತುಂಗಪ್ಪ ಬಂಗೇರ, ಕಡೇಶ್ವಾಲ್ಯ ಸಿಎ ಬ್ಯಾಂಕ್ ಅಧ್ಯಕ್ಷ ವಿದ್ಯಾಧರ ರೈ ಪೆರ್ಲಾಪು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಸಾಂತಪ್ಪ ಪೂಜಾರಿ, ಅಮರನಾಥ ಶೆಟ್ಟಿ ಕುರ್ಯಾಳ, ಕುಸುಮಾಕರ ಶೆಟ್ಟಿ ಕುರ್ಯಾಳ, ರಾಜೇಂದ್ರ ಪೂಜಾರಿ ಕಡಮಾಜೆ, ರವೀಂದ್ರ ಶೆಟ್ಟಿ ಕೈಯಾಳ, ಆನಂದ ಶೆಟ್ಟಿ ಬಾಚಕೆರೆ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *