Breaking
19 Sep 2026, Sat

ಬಡ ಕುಟುಂಬಕ್ಕೆ ಕಾಡಿದ ಸಾಲ ಬಾಧೆ: ತಂದೆ, ತಾಯಿ, ಮಗ ಬಾವಿಗೆ ಹಾರಿ ಆತ್ಮಹತ್ಯೆ!

ತೆಕ್ಕಟ್ಟೆ : ಸಾಲ ಬಾಧೆ ತಾಳಲಾರದೆ ತಂದೆ, ತಾಯಿ, ಮಗ ಬಾವಿ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಮೇ 15ರ ಮುಂಜಾನೆ ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯಲ್ಲಿ ತಂದೆ ಮತ್ತು ಮಗ ಮೃತಪಟ್ಟು, ತಾಯಿಯ ಪರಿಸ್ಥಿತಿ ಗಂಭೀರವಾಗಿದೆ.
ಅಂಕದಕಟ್ಟೆ ಪೆಟ್ರೋಲ್ ಬಂಕ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮಾಧವ ದೇವಾಡಿಗ(56), ಹಾಗೂ ಅವರ ಮಗ ಪ್ರಸಾದ್ ದೇವಾಡಿಗ(22) ಮೃತಪಟ್ಟವರು. ತಾಯಿ ತಾರಾ ದೇವಾಡಿಗ ಅವರಿಗೆ ಕೋಟೇಶ್ವರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸಲಾಗಿದೆ.

ಇಂದು ಮುಂಜಾನೆ ತಂದೆ ಮತ್ತು ಮಗ ಮೊದಲಿಗೆ ಬಾವಿಗೆ ಹಾರಿದ್ದು ಇದನ್ನು ನೋಡಿದ ತಾಯಿಯೂ ಬಾವಿಗೆ ಹಾರಿದ್ದಾರೆ.

ಈ ವೇಳೆ ಅವರ ಆಕ್ರಂದನದ ಧ್ವನಿ ಕೇಳಿದ ಸ್ಥಳೀಯ ನಿವಾಸಿಗಳಾದ ಸಂತೋಷ್ ಶೆಟ್ಟಿ, ಶ್ರೀನಾಥ್ ಶೆಟ್ಟಿ ಹಾಗೂ ಇನ್ನೂ ಹಲವರು ರಕ್ಷಣೆಗೆ ಧಾವಿಸಿದ್ದರು.

ಆದರೆ ತಂದೆ, ಮಗ ಅದಾಗಲೇ ಮೃತಪಟ್ಟಿದ್ದು ಕುಂದಾಪುರದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಮೃತ ದೇಹವನ್ನು ಮೇಲಕ್ಕೆತ್ತಿದ್ಧಾರೆ ಎಂದು ತಿಳಿದು ಬಂದಿದೆ.


ಕೋಟದ ಜೀವನ್ ಮಿತ್ರ ನಾಗರಾಜ್ ಅವರ ಆಂಬುಲೆನ್ಸ್ ಸಹಾಯದಿಂದ ತಾರಾ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

ಕೋಟ ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಘವೇಂದ್ರ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿದ್ದಾರೆ.

ಸಾಲಬಾಧೆ ಕಾಡುತ್ತಿರುವುದರಿಂದ ಮರ್ಯಾದೆಗೆ ಅಂಜಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ಮನೆಯಲ್ಲಿ ಡೆತ್ ನೋಟ್ ಸಿಕ್ಕಿದ್ದು, ಘಟನೆಯಿಂದ ಇಡೀ ಗ್ರಾಮವೇ ಬೆಚ್ಚಿಬಿದ್ದಿದೆ.

Leave a Reply

Your email address will not be published. Required fields are marked *