ಬಂಟ್ವಾಳ: ರಾಜ್ಯದಲ್ಲಿ ಶಕ್ತಿ ಯೋಜನೆ ಆರಂಭವಾದ ಬಳಿಕ ಮಹಿಳೆಯರು ಕರ್ನಾಟಕದಾದ್ಯಂತ ಉಚಿತ ಬಸ್ ಪ್ರಯಾಣದ ಲಾಭ ಪಡೆಯುತ್ತಿದ್ದಾರೆ. ಪ್ರತೀ ದಿನ ದೂರದ ಊರಿಗೆ ಕೆಲಸಕ್ಕೆ ತೆರಳುವ ಮಹಿಳೆಯರಿಗಂತೂ ಈ ಶಕ್ತಿ ಯೋಜನೆ ವರವಾಗಿ ಬಿಟ್ಟಿದೆ. ಆದರೆ ರಾಜ್ಯದ ಗಡಿ ಪ್ರದೇಶದಲ್ಲಿರುವ ಮಹಿಳೆಯರು ಮಾತ್ರ ಈ ಯೋಜನೆಯಿಂದ ವಂಚಿತರಾಗಿದ್ದು ಇದರಿಂದ ಮಹಿಳೆಯರು ಬೇಸರ ವ್ಯಕ್ತಪಡಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಪ್ರದೇಶ ಕೇರಳದ ಗಡಿ ಪ್ರದೇಶಕ್ಕೆ ತಾಗಿಕೊಂಡಿದ್ದು, ಮಂಗಳೂರು, ಪುತ್ತೂರು, ಬಿ.ಸಿ.ರೋಡು, ವಿಟ್ಲ, ಸುಳ್ಯ ಮೊದಲಾದ ಭಾಗಗಳಿಂದ ಕೇರಳದ ಕಾಸರಗೋಡು ಸೇರಿದಂತೆ ಕೆಲವು ಪ್ರದೇಶಗಳಿಗೆ ರಾಜ್ಯದ ಸರಕಾರಿ ಬಸ್ಸು ಸಂಚರಿಸುತ್ತಿವೆ. ಇವುಗಳೇ ಈ ಪ್ರದೇಶಗಳ ಜನರಿಗೆ ಆಧಾರ. ಆದರೆ ಈ ಬಸ್ಸುಗಳಲ್ಲಿ ಕರ್ನಾಟಕದ ಗಡಿಯೊಳಗೆ ಸಂಚರಿಸುವವರಿಗೂ ಉಚಿತ ಪ್ರಯಾಣದ ಭಾಗ್ಯವಿಲ್ಲ. ತಮ್ಮ ಮನೆಯ ಬಾಗಿಲ ಮುಂದೆಯೇ ಹಾದು ಹೋಗುವ ಅಂತರಾಜ್ಯ ಬಸ್‌ಗಳಲ್ಲಿ ಮಹಿಳೆಯರು ಹಣ ನೀಡಿ ಟಿಕೆಟ್ ಪಡೆದುಕೊಳ್ಳಬೇಕಿದೆ. ಹೀಗಾಗಿ ಅಂತಾರಾಜ್ಯ ಬಸ್ಸುಗಳಲ್ಲಿ ರಾಜ್ಯದ ಗಡಿ ಪ್ರದೇಶದವರೆಗಾದರೂ ಕರ್ನಾಟಕದ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.
ಮಂಗಳೂರು-ಕಾಸರಗೋಡು ರೂಟ್‌ನಲ್ಲಿ ಅಂತಾರಾಜ್ಯ ಬಸ್ಸುಗಳ ಜತೆಗೆ ತಲಪಾಡಿವರೆಗೆ ಮಂಗಳೂರು ಸಿಟಿ ಬಸ್ಸು(ನರ್ಮ್)ಗಳು ಓಡುವುದರಿಂದ ಕನಿಷ್ಠ ಆ ಬಸ್ಸುಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದು. ಆದರೆ ಬಿ.ಸಿ.ರೋಡಿನಿಂದ ಮುಡಿಪು ಮೂಲಕ ಕಾಸರಗೋಡಿಗೆ ಬಸ್ಸು ಸಂಚರಿಸುತ್ತಿದ್ದು, ಇಲ್ಲಿನ ಮೆಲ್ಕಾರ್-ಮುಡಿಪು ಮಧ್ಯೆ ಅಂತಾರಾಜ್ಯ ಬಸ್ಸು ಹೊರತುಪಡಿಸಿ ಇತರ ಯಾವುದೇ ಕೆಎಸ್‌ಆರ್‌ಟಿಸಿ ಬಸ್ಸು ಸಂಚರಿಸುತ್ತಿಲ್ಲ. ಹಾಗಾಗಿ ಈ ಭಾಗದ ಮಂದಿಗೆ ಶಕ್ತಿ ಯೋಜನೆಯ ಭಾಗ್ಯ ಸಿಕ್ಕಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ಗಡಿಭಾಗದ ಮಹಿಳೆಯರಿಗೆ ವಂಚಿಸಿತೆ ರಾಜ್ಯಸರಕಾರ?
ಶಕ್ತಿ ಯೋಜನೆ ಜಾರಿಗೊಳಿಸುವ ವೇಳೆ ಸರಕಾರ ಗಡಿ ಭಾಗದವರನ್ನು ಕೈಬಿಟ್ಟಿದ್ದು ನಿಜ. ಕಾರಣ ಅಂತಾರಾಜ್ಯ ಬಸ್ಸುಗಳಲ್ಲಿ ಎರಡೂ ರಾಜ್ಯದ ಪ್ರಯಾಣಿಕರು ಇರುತ್ತಾರೆ. ಇಂಥ ಸಂದರ್ಭದಲ್ಲಿ ಶಕ್ತಿ ಯೋಜನೆ ಅನ್ವಯಿಸಿದರೆ ಅನಗತ್ಯ ಗೊಂದಲ ಉಂಟಾಗುತ್ತದೆ. ಅಲ್ಲದೇ ಶಕ್ತಿ ಯೋಜನೆಯಿಂದ ಅಂತಾರಾಜ್ಯದ ಬಸ್‌ಗಳಿಗೆ ಬೇಡಿಕೆ ಕುಸಿಯಬಹುದು. ಆಗ ಅಂತಾರಾಜ್ಯ ಬಸ್ಸುಗಳಿಂದ ಆಕ್ಷೇಪ ಬರಬಹುದು ಎಂಬ ಲೆಕ್ಕಾಚಾರ ಸರಕಾರದ್ದು. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಗಡಿ ಭಾಗದ ಮಹಿಳೆಯರ ಈ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಕೆಎಸ್‌ಆರ್‌ಟಿಸಿ, ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ್ ಶೆಟ್ಟಿ, ಅವರು ʼಅಂತಾರಾಜ್ಯ ಬಸ್ಸುಗಳಲ್ಲಿ ಎರಡೂ ರಾಜ್ಯದವರೂ ಓಡಾಡುವುದರಿಂದ ಸರಕಾರದ ಆದೇಶದ ಪ್ರಕಾರ ಶಕ್ತಿ ಯೋಜನೆಯನ್ವಯ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಇಲ್ಲ. ಮಂಗಳೂರು ವಿಭಾಗದ ಯಾವುದೇ ಅಂತಾರಾಜ್ಯ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿಲ್ಲʼ ಎಂದಿದ್ದಾರೆ.


