ಮೇ 11ರಂದು ಕೊಯಿಲ ‘ಜ್ಞಾನ ಮಂದಿರ’ ಸಮುದಾಯ ಭವನ ಉದ್ಘಾಟನೆ

ಬಂಟ್ವಾಳ : ರಾಯಿ-ಕೊಯಿಲ-ಅರಳ ಗ್ರಾಮಗಳ ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಮಾಜ ಸೇವಾ ಸಂಘದ ವತಿಯಿಂದ ಕೊಯಿಲ ಎಂಬಲ್ಲಿ ₹ 2.50 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಕೇರಳದ ಶಿವಗಿರಿ ಮಾದರಿಯ ‘ಜ್ಞಾನ ಮಂದಿರ’ ಮತ್ತು ‘ಬಿಲ್ಲವ ಸಮುದಾಯ ಭವನ’ ಮೇ 11ರಂದು ಲೋಕಾರ್ಪಣೆಗೊಳ್ಳಲಿದೆ ಎಂದು ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಜಯಪ್ರಕಾಶ್ ಜೆ.ಎಸ್. ತಿಳಿಸಿದ್ದಾರೆ.

ಮೇ 9ರಂದು ಸಂಜೆ 4 ಗಂಟೆಗೆ ಬಿ.ಸಿ.ರೋಡು ಗಾಣದಪಡ್ಪು ಗುರುಮಂದಿರ ಬಳಿ ಗುರು ಮೂರ್ತಿ, ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಮೇ 11ರಂದು ವೇಣೂರು ಸದಾನಂದ ಶಾಸ್ತ್ರಿ ಮತ್ತು ಕುದ್ರೋಳಿ ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮಣ ಶಾಂತಿ ಮಾರ್ಗದರ್ಶನದಲ್ಲಿ ಗುರುಗಳ ಮೂರ್ತಿ ಪ್ರತಿಷ್ಠೆ ಮತ್ತು ಚಿಂತನಾ ಸಮಾವೇಶ ನಡೆಯಲಿದೆ. ಬೆಳಿಗ್ಗೆ 10 ಗಂಟೆಗೆ ಮುಖಂಡ ಬಿ.ಜನಾರ್ದನ ಪೂಜಾರಿ ‘ಜ್ಞಾನ ಮಂದಿರ’ ಲೋಕಾರ್ಪಣೆಗೊಳಿಸುವರು. ಉದ್ಯಮಿ ಬಿ.ಪ್ರಕಾಶ ಶೆಟ್ಟಿ ಬೆಂಗಳೂರು ಅವರು ಸಮುದಾಯ ಭವನ, ಸಂಸದ ಕೋಟ ಶ್ರೀನಿವಾಸ ಪೂಜಾರಿ ಅನ್ನಛತ್ರ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕರಾದ ರಾಜೇಶ ನಾಯ್ಕ್ ಉಳಿಪಾಡಿ, ಉಮಾನಾಥ ಕೋಟ್ಯಾನ್, ಬಿ.ಕೆ.ಹರಿಪ್ರಸಾದ್, ಬಿ.ಮಂಜುನಾಥ ಭಂಡಾರಿ, ಕಿಶೋರ್ ಕುಮಾರ್ ಬೊಟ್ಯಾಡಿ, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭಾಗವಹಿಸುವರು ಎಂದು ಹೇಳಿದ್ದಾರೆ.

25 ವರ್ಷಗಳ ಹಿಂದೆ, ನಿವೃತ್ತ ನ್ಯಾಯಾಧೀಶ ದಿ.ಕೂಡೂರು ನಾರಾಯಣ ರೈ ಅವರು ಕೊಡುಗೆಯಾಗಿ ನೀಡಿದ 10 ಸೆಂಟ್ಸ್ ಜಮೀನಿನಲ್ಲಿ ಆರಂಭಗೊಂಡ ಸಂಘವು ಸ್ಥಳೀಯ ಸುರೇಂದ್ರ ಪೂಜಾರಿ, ರಾಜು ಪೂಜಾರಿ, ದಾಮೋದರ ಕರ್ಕೇರ, ಶೇಖರ ಶಾಂತಿಪಲ್ಕೆ ಅವರ ಅಧ್ಯಕ್ಷತೆಯಲ್ಲಿ ಹಂತ ಹಂತವಾಗಿ ಬೆಳವಣಿಗೆ ಕಂಡಿದೆ. 17 ವರ್ಷಗಳ ಅವಧಿಗೆ ಎಸ್.ಪಿ.ಶ್ರೀಧರ ಅಣ್ಣಳಿಕೆ ಅಧ್ಯಕ್ಷರಾಗಿ ಸಂಘಟನೆ ಜೊತೆಗೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹಧನ ವಿತರಿಸಿದ್ದರು.

ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಕಟ್ಟಡಗಳಿಗೆ ಪಿಲ್ಕಾಜೆಗುತ್ತು ಶೇಖರ್ ಅಂಚನ್ ಅಧ್ಯಕ್ಷತೆಯಲ್ಲಿ ಸಂಘವು ಮತ್ತಷ್ಟು ಜಮೀನು ಖರೀದಿಸಿದೆ. ವಾಸ್ತುಶಿಲ್ಪಿ ಪ್ರಮಲ್ ಕುಮಾರ್ ಕಾರ್ಕಳ ಇವರಿಂದ ವಿನೂತನ ಶೈಲಿಯ ‘ಜ್ಞಾನ ಮಂದಿರ’ ಮತ್ತು ಸುಸಜ್ಜಿತ ಸಮುದಾಯ ಭವನ ಕಾಮಗಾರಿ ಬಹುತೇಕ ಪೂರ್ಣಗೊ‍ಳ್ಳುತ್ತಾ ಬರುತ್ತಿದ್ದು, ಪ್ರತಿದಿನ ರಾತ್ರಿ ಸ್ಥಳೀಯ ಮೂರು ಗ್ರಾಮಗಳ ಸದಸ್ಯರು ಶ್ರಮದಾನ ನಡೆಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *