Breaking
25 Mar 2026, Wed

ಕೃಷಿಪತ್ತಿನ ಸಹಕಾರ ಸಂಘಗಳು ಸಾಮಾಜಿಕ ಸೇವೆಯಲ್ಲಿ  ತೊಡಗಿದಾಗ ಸ್ವಾಭಿಮಾನ ಬದುಕು ನಿರ್ವಹಿಸಲು ಸಾಧ್ಯ: ಸುರೇಶ್ ಶೆಟ್ಟಿ

ಸಿದ್ದಕಟ್ಟೆ: ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಗಳು ಸಾಲವನ್ನು ನೀಡುವುದರ ಜೊತೆಗೆ ಠೇವಣಿ ಸಂಗ್ರಹಿಸುವ ಆರ್ಥಿಕ ವ್ಯವಹಾರವನ್ನಷ್ಠೇ ಮಾಡದೇ ಮಹಿಳಾ ಸಬಲೀಕರಣದ ಕಲ್ಪನೆಯೊಂದಿಗೆ ಹಿಂದುಳಿದ ವರ್ಗಗಳ ಮತ್ತು ಪ.ಜಾತಿ ,ಪಂಗಡಗಳ ಮಾತೆಯರಿಗೆ ಸ್ವಾಭಿಮಾನಿಯಾಗಿ,ಸ್ವಾವಲಂಬನೆಯ ಬದುಕನ್ನು ನಿರ್ವಹಿಸಲು ಪೂರಕವಾದ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡು ಸಹಕಾರ ನೀಡಿದಾಗ ಮಾನವ ಸಮಾಜ ಸಮಗ್ರ ಅಭಿವೃದ್ದಿಯೊಂದಿಗೆ ಸಾರ್ಥಕತೆಯ ಬದುಕನ್ನು ಕಾಣಲು ಸಾಧ್ಯವಾಗುತ್ತದೆ . ಈ ನಿಟ್ಟಿನಲ್ಲಿ ಸಿದ್ದಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘವು ಸುಮಾರು 60 ಮಂದಿ ಮಹಿಳಾ ಅಭ್ಯರ್ಥಿಗಳಿಗೆ ನಾಲ್ಕು ತಿಂಗಳ ಅವಧಿಯಲ್ಲಿ ಉಚಿತವಾಗಿ ಟೈಲರಿಂಗ್ ತರಬೇತಿ ಮತ್ತು ಫ್ಯಾಶನ್ ಡಿಸೈನಿಂಗ್ ತರಬೇತಿಯನ್ನು ನೀಡುವುದರ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಸ್ವಾವಲಂಬನೆ ಬದುಕಿಗೆ ಹಾದಿ ಮಾಡುವ ಮೂಲಕ ಜಿಲ್ಲೆಯ ಇತರ ಸಹಕಾರ ಸಂಘಗಳಿಗೆ ಮಾದರಿಯಾಗಿದೆ ಎಂದು ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ನ ಅಧ್ಯಕ್ಷ ಸುರೇಶ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಸಿದ್ದಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವತಿಯಿಂದ ಕರ್ನಾಟಕ ಸಹಕಾರಿ ಪಾಲಿಟೆಕ್ನಿಕ್ ,ಸಿ ಸಿ ಟೆ ಕ್ ಮಂಗಳೂರು ,ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ಮತ್ತು ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಇವರ ಸಹಕಾರದಲ್ಲಿ ಸಿದ್ದಕಟ್ಟೆ ಸಹಕಾರಿ ಸಂಘದ ಬೆಳ್ಳಿಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ಜರಗಿದ ಟೈಲರಿಂಗ್ ತರಬೇತಿ ಮತ್ತು ಫ್ಯಾಶನ್ ಡಿಸೈನಿಂಗ್ ತರಬೇತಿಯ ಸಮರೋಪ ಸಮಾರಂಭದಲ್ಲಿ ತರಬೇತಿ ಪಡೆದವರಿಗೆ ಪ್ರಮಾಣ ಪತ್ರ ಮತ್ತು ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ವಿತರಿಸಿ ಮಾತಾನಾಡಿದರು.

ಮುಖ್ಯ ಅತಿಥಿಯಾಗಿದ್ದ ಮೂಡಬಿದ್ರಿ ಹನುಮಾನ್ ದೇವಸ್ಥಾನದ ಅರ್ಚಕರಾದ ನಾಗೇಂದ್ರ ಭಟ್ ಮಾತಾನಾಡಿ ಗೃಹಿಣಿಯರು ಟೈಲರಿಂಗ್ ತರಬೇತಿ ಮತ್ತು ಫ್ಯಾಶನ್ ಡಿಸೈನಿಂಗ್ ತರಬೇತಿಯ ಪಡೆದುಕೊಂಡು ತಮ್ಮ ಕುಟುಂಬ ನಿರ್ವಹಣೆಗೆ ಬೇರೋಬ್ಬರನ್ನು ಅವಲಂಬಿತರಾಗದೇ ಸಂತೃಪ್ತಿ ಜೀವನ ನಡೆಸಲು ಅನುಕೂಲವಾಗುತ್ತದೆ. ಈ ಮೂಲಕ ಎಲ್ಲಾ ಕಡೆಗಳಲ್ಲಿನ ಸಹಕಾರ ಸಂಘಗಳು ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಎಲ್ಲರಿಗೂ ಪ್ರಯೋಜನ ಸಿಗಲಿದೆ ಎಂದರು.

ಮಂಗಳೂರು ಸಿ ಸಿ ಟೆ ಕ್ ಮ್ಯಾನೇಜರ್ ರವೀಂದ್ರ ಎಂ ಖೇಣಿ ಮಾತಾನಾಡುತ್ತಾ ಕರ್ನಾಟಕ ಸಹಕಾರಿ ಪಾಲಿಟೆಕ್ನಿಕ್ ಮಂಗಳೂರು ಇದು ಸ್ವಾತಂತ್ರ್ಯ ಪೂರ್ವದಲ್ಲಿಯೇ ಸ್ಥಾಪಿತಗೊಂಡು ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣದ ಮಾರ್ಗದರ್ಶನ ನೀಡುವ ಮೂಲಕ ಉನ್ನತ ಶ್ರೇಣಿಯಲ್ಲಿದ್ದು ,ಕೇಂದ್ರ ಸರಕಾರದ ವಿಶ್ವಕರ್ಮ ಯೋಜನೆಯಡಿಯಲ್ಲಿ ಹಣಕಾಸಿನ ಸೌಲಭ್ಯ ಪಡೆಯಲು ಇಂತಹ ತರಬೇತಿಗಳು ಅತ್ಯವಶ್ಯಕವಾಗಿದ್ದು ,ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಲು ಗ್ರಾಮಾಂತರ ಪ್ರದೇಶಗಳಲ್ಲಿನ ಮಹಿಳೆಯರು ಕಾರ್ಯಪ್ರವೃತ್ತರಾಗಬೇಕೆಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಿದ್ದಕಟ್ಟೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಅಧ್ಯಕ್ಷ ಪ್ರಭಾಕರ ಪ್ರಭು ಮಾತಾನಾಡಿ ಹಿರಿಯರ ಆಶಯದಂತೆ ನಮ್ಮ ಸಂಘವು ಎಲ್ಲಾ ಕ್ಷೇತ್ರಗಳಲ್ಲಿ ತೊಡಗಿರುವ ಜನರಿಗೆ ವಿವಿಧ ರೀತಿಯಲ್ಲಿ ತಮ್ಮ ಜೀವನೋಪಾಯಕ್ಕೆ ಪೂರಕವಾಗಿರುವ ಯೋಜನೆಗಳಿಗೆ ಸ್ಪಂದಿಸಿ ಸಹಕಾರ ನೀಡುತ್ತಾ ಬಂದಿದೆ . ಮುಂದಿನ ದಿನಗಳಲ್ಲಿಯೂ ಸಹ ಸಂಘದ ನಿರ್ದೇಶಕರ ,ಸಿಬ್ಬಂದಿಗಳ ಮತ್ತು ಸರ್ವಸದಸ್ಯರ ಸಹಕಾರದಲ್ಲಿ ಜನಪಯೋಗಿ ಕಾರ್ಯಕ್ರಮಗಳಿಗೆ ಸಹಕಾರ ನೀಡಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿದ್ದ ಸಂಘದ ಉಪಾಧ್ಯಕ್ಷ ಸಂದೇಶ್ ಶೆಟ್ಟಿ , ಟೈಲರಿಂಗ್ ತರಬೇತಿ ಮತ್ತು ಫ್ಯಾಶನ್ ಡಿಸೈನಿಂಗ್ ತರಬೇತುದಾರೆ ಕು.ಪ್ರೇಮಾ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಸಂಗಬೆಟ್ಟು ಗ್ರಾ.ಪ ಅಧ್ಯಕ್ಷೆ ರಾಜೀವಿ ಪೂಜಾರ್ತಿ ,ಉದ್ಯಮಿ ವೀಣಾ ಭಾಸ್ಕರ್ ನಾಯಕ್ ,ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ,ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಅಧ್ಯಕ್ಷ ಶಿವಯ್ಯ ಎಚ್ ,ಸ್ಥಾಪಕ ಅಧ್ಯಕ್ಷ ಮೈಕಲ್ ಡಿಕೋಸ್ತಾ,ಉಪಸ್ಥಿತರಿದ್ದರು.

ಈ ಸಂಧರ್ಭ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಸಿದ್ದಕಟ್ಟೆ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ಲಿಖಿತಾ ಆರ್ ಸಾಲ್ಯಾನ್ ರವರನ್ನು ಅಭಿನಂದಿಸಲಾಯಿತು. ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ ವತಿಯಿಂದ ಅರ್ಹ ಮಹಿಳೆಯರಿಗೆ ಉಚಿತವಾಗಿ ಹೊಲಿಗೆ ಯಂತ್ರ ನೀಡಲಾಯಿತು.

ಕಾರ್ಯಕ್ರಮದಲ್ಲಿ ಸಂಘದ ನಿರ್ದೇಶಕರಾದ ವಿಶ್ವನಾಥ ಶೆಟ್ಟಿಗಾರ್,ಜಾರಪ್ಪ ನಾಯ್ಕ ,ಎ ಶಿವ ಗೌಡ,ಮಂದರಾತಿ ಎಸ್ ಶೆಟ್ಟಿ,ಪುಷ್ಪಲತಾ ಎಸ್ ಆರ್ ,ಆರಂಬೋಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಎಚ್ ಹುಲಿಮೇರು, ರೋಟರಿ ಕ್ಲಬ್ ಲೊರೆಟ್ಟೋ ಹಿಲ್ಸ್ನ ಪದಾಧಿಕಾರಿಗಳಾದ ರಾಘವೇಂದ್ರ ಭಟ್ ಹೊಕ್ಕಾಡಿಗೋಳಿ ,ವಿಜಯ ಫೆರ್ನಾಂಡಿಸ್,ರಾಮಚಂದ್ರ ಶೆಟ್ಟಿಗಾರ್,ಸೀತಾರಾಮ ಶೆಟ್ಟಿ,ಹರಿಪ್ರಸಾದ್ ಶೆಟ್ಟಿ ,ನಿವೃತ್ತ ಶಿಕ್ಷಕ ಹಾಗೂ ಸಮಾಜ ಸೇವಕ ಕೆ ನಾರಾಯಣ ನಾಯಕ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

ಚಂದ್ರಿಕಾ ಸ್ವಾಗತಿಸಿ ,ಸಹಕಾರ ಸಂಘದ ಸಿಬ್ಬಂದಿ ಸುಭಾಸ್ ಬಂಗೇರ ಕಾರ್ಯಕ್ರಮ ನಿರೂಪಿಸಿ ,ಧನ್ಯವಾದವಿತ್ತರು.

Leave a Reply

Your email address will not be published. Required fields are marked *