Breaking
18 Nov 2026, Wed

ಅರ್ಹರಿಗೆ ವಾಸ್ತವ್ಯದ ಪುರಾವೆಯಾಗಿ ಎಪಿಎಲ್ ಪಡಿತರ ಚೀಟಿ ತಕ್ಷಣ ವಿತರಿಸಲು ಪ್ರಭಾಕರ ಪ್ರಭು ಆಗ್ರಹ

ಸಿದ್ದಕಟ್ಟೆ: ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಅರ್ಹ ಬಡ ಕುಟುಂಬಗಳಿಗೆ ಬಿಪಿಎಲ್ ಪಡಿತರ ಚೀಟಿ ವಿತರಣೆ ಸ್ಥಗಿತಗೊಂಡಿರುವುದರಿಂದ ಸಾವಿರಾರು ಕುಟುಂಬಗಳು ಸರಕಾರದ ವಿವಿಧ ಯೋಜನೆಗಳ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ವಾಸ್ತವ್ಯದ ಪುರಾವೆಯಾಗಿ ಅಗತ್ಯವಿರುವ ಅರ್ಹ ಫಲಾನುಭವಿಗಳಿಗೆ ಎಪಿಎಲ್ ಪಡಿತರ ಚೀಟಿಯನ್ನು ತಕ್ಷಣ ವಿತರಿಸುವಂತೆ ಮಾಜಿ ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಅವರು ರಾಜ್ಯದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರನ್ನು ಆಗ್ರಹಿಸಿದ್ದಾರೆ.

ನಕಲಿ ಬಿಪಿಎಲ್ ಪಡಿತರ ಚೀಟಿಗಳ ಹಾವಳಿ ಹಾಗೂ ಆರ್ಥಿಕ ಸಂಕಷ್ಟದ ಕಾರಣ ನೀಡಿ ಅರ್ಹರಿಗೆ ಬಿಪಿಎಲ್ ಪಡಿತರ ಚೀಟಿ ನೀಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಬಿಪಿಎಲ್ ಮಾನದಂಡದಡಿ ದೊರೆಯುವ ವಿವಿಧ ಸರಕಾರಿ ಯೋಜನೆಗಳ ಸೌಲಭ್ಯ ಪಡೆಯಲು ಅನೇಕ ಕುಟುಂಬಗಳು ಸಮಸ್ಯೆ ಎದುರಿಸುತ್ತಿವೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಬಿಪಿಎಲ್ ಪಡಿತರ ಚೀಟಿ ಇಲ್ಲದಿರುವುದು ಹಾಗೂ 1.20 ಲಕ್ಷ ರೂ. ಆದಾಯ ಮಿತಿಯ ಕಾರಣದಿಂದ ಸಂಧ್ಯಾ ಸುರಕ್ಷಾ, ವಿಧವಾ ವೇತನ, ವೃದ್ಧಾಪ್ಯ ವೇತನ ಮತ್ತು ವಿಕಲಚೇತನರ ಪಿಂಚಣಿ ಸೇರಿದಂತೆ ವಿವಿಧ ಪಿಂಚಣಿ ಸೌಲಭ್ಯಗಳಿಂದ ಹಲವರು ವಂಚಿತರಾಗಿದ್ದಾರೆ. ವಿಶೇಷವಾಗಿ ಪಿಂಚಣಿಯನ್ನೇ ಅವಲಂಬಿಸಿ ಜೀವನ ಸಾಗಿಸುವ ವೃದ್ಧರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನೊಂದೆಡೆ, ಕೃಷಿಯನ್ನೇ ಅವಲಂಬಿಸಿರುವ ಅನೇಕ ಕುಟುಂಬಗಳು ವಾಸ್ತವ್ಯದ ಪುರಾವೆಯಾಗಿ ಸಲ್ಲಿಸಲು ಪಡಿತರ ಚೀಟಿ ಇಲ್ಲದ ಕಾರಣ ಸಹಕಾರ ಸಂಘಗಳಲ್ಲಿ ಕೃಷಿ ಸಾಲ ಹಾಗೂ ಇತರ ಸೌಲಭ್ಯಗಳನ್ನು ಪಡೆಯಲು ತೊಂದರೆ ಅನುಭವಿಸುತ್ತಿವೆ. ಸಣ್ಣಪುಟ್ಟ ವ್ಯಾಪಾರಸ್ಥರು ಮತ್ತು ಮಧ್ಯಮ ವರ್ಗದ ಕೃಷಿಕರಿಗೂ ವಿವಿಧ ಸೌಲಭ್ಯಗಳನ್ನು ಪಡೆಯಲು ಎಪಿಎಲ್ ಪಡಿತರ ಚೀಟಿಯ ಅಗತ್ಯವಿದೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

ಬಿಪಿಎಲ್ ಪಡಿತರ ಚೀಟಿ ವಿತರಣೆಯಲ್ಲಿ ಆರ್ಥಿಕ ಅಥವಾ ಆಡಳಿತಾತ್ಮಕ ಅಡಚಣೆಗಳಿದ್ದರೂ, ಸರಕಾರಕ್ಕೆ ಹೆಚ್ಚುವರಿ ಆರ್ಥಿಕ ಹೊರೆ ಉಂಟುಮಾಡದ ಎಪಿಎಲ್ ಪಡಿತರ ಚೀಟಿಗಳನ್ನು ವಿತರಿಸಲು ಯಾವುದೇ ತೊಂದರೆ ಇರಬಾರದು. ಆದ್ದರಿಂದ ಅರ್ಹರಿಗೆ ಎಪಿಎಲ್ ಪಡಿತರ ಚೀಟಿ ನೀಡುವ ಪ್ರಕ್ರಿಯೆಯನ್ನು ತಕ್ಷಣ ಆರಂಭಿಸಿ, ನಿರಂತರ ವಿತರಣೆಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಪ್ರಭಾಕರ ಪ್ರಭು ಅವರು ಒತ್ತಾಯಿಸಿದ್ದಾರೆ.

ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಆಯುಕ್ತರು ಹಾಗೂ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *