ಬಂಟ್ವಾಳ: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ 2025-26ನೇ ಸಾಲಿನಲ್ಲಿ ಕರಾವಳಿ ಭಾಗದ ಅಡಿಕೆ ಬೆಳೆಗಾರರಿಗೆ ಅತ್ಯಂತ ಕಡಿಮೆ ಪ್ರಮಾಣದ ವಿಮೆ ಪರಿಹಾರ ಬಿಡುಗಡೆಯಾಗಿದ್ದು, ವಿಮಾ ಕಂಪೆನಿ ರೈತರಿಗೆ ಅನ್ಯಾಯ ಮಾಡಿದೆ ಎಂದು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಆರೋಪಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ ಹಾಗೂ ಉಳ್ಳಾಲ ತಾಲೂಕುಗಳು ಕಡಿಮೆ ಮಳೆ ಹಾಗೂ ವಿಪರೀತ ತಾಪಮಾನ ಸೇರಿದಂತೆ ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಬರಪೀಡಿತ ತಾಲೂಕುಗಳೆಂದು ಘೋಷಣೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದ ಬೆಳೆ ವಿಮೆ ಪರಿಹಾರದ ನಿರೀಕ್ಷೆಯಲ್ಲಿದ್ದ ಅಡಿಕೆ ಬೆಳೆಗಾರರಿಗೆ ಬಿಡುಗಡೆಯಾಗಿರುವ ಅಲ್ಪ ಮೊತ್ತ ನಿರಾಶೆ ಮೂಡಿಸಿದೆ ಎಂದು ಅವರು ತಿಳಿಸಿದ್ದಾರೆ.

ವಿಮಾ ಯೋಜನೆಯಡಿ ರೈತರ ಪಾಲು ಸೇರಿದಂತೆ ರಾಜ್ಯ ಹಾಗೂ ಕೇಂದ್ರ ಸರಕಾರದ ಪಾಲನ್ನು ಸೇರಿಸಿ ಒಂದು ಎಕರೆಗೆ ಸುಮಾರು ₹18,000 ವಿಮಾ ಕಂಪೆನಿಗೆ ಸಂದಾಯವಾಗುತ್ತದೆ. ಆದರೆ ರೈತರ ಪಾಲಿಗೆ ಅತ್ಯಲ್ಪ ಪರಿಹಾರ ಮಾತ್ರ ಬಿಡುಗಡೆಯಾಗಿರುವುದು ಪ್ರಶ್ನಾರ್ಹವಾಗಿದೆ ಎಂದು ಪ್ರಭಾಕರ ಪ್ರಭು ಹೇಳಿದ್ದಾರೆ.

ಬಂಟ್ವಾಳ ತಾಲೂಕಿನ ರಾಯಿ ಮತ್ತು ಕೊಯಿಲ ಗ್ರಾಮಗಳಿಗೆ ಸಂಬಂಧಿಸಿದಂತೆ ಎಕರೆಗೆ ಕೇವಲ ₹87 ಪರಿಹಾರ ಬಿಡುಗಡೆಯಾಗಿರುವುದು ಮಾನದಂಡದ ಸಮೀಕ್ಷೆಯ ಕುರಿತು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಅವರು ಹೇಳಿದ್ದಾರೆ. ಗರಿಷ್ಠ ₹51,800ರವರೆಗೆ ಪರಿಹಾರ ಪಡೆಯಲು ಅವಕಾಶವಿದ್ದರೂ, ಕೆಲವೆಡೆ ಕೇವಲ ₹5–6 ಸಾವಿರದಷ್ಟು ಪರಿಹಾರ ಬಿಡುಗಡೆಯಾಗಿರುವುದರಿಂದ ಈ ಬಗ್ಗೆ ಸಮಗ್ರ ಪರಿಶೀಲನೆ ಅಗತ್ಯವಿದೆ ಎಂದು ಒತ್ತಾಯಿಸಿದ್ದಾರೆ.

ವಿಮಾ ಕಂಪೆನಿಯ ಕಾರ್ಯವಿಧಾನದಲ್ಲಿ ಮಧ್ಯವರ್ತಿಗಳ ಹಸ್ತಕ್ಷೇಪವಿದೆಯೇ ಎಂಬ ಅನುಮಾನವೂ ರೈತರಲ್ಲಿ ಮೂಡಿದೆ ಎಂದು ಅವರು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಮಧ್ಯಪ್ರವೇಶಿಸಿ, ವಿಮಾ ಕಂಪೆನಿ ಹಾಗೂ ತೋಟಗಾರಿಕೆ ಇಲಾಖೆಯೊಂದಿಗೆ ಮತ್ತೊಮ್ಮೆ ಸಮಗ್ರ ಪರಿಶೀಲನೆ ನಡೆಸಬೇಕು. ಬೆಳೆ ವಿಮೆ ಪರಿಹಾರವನ್ನು ಮರುಪರಿಶೀಲಿಸಿ, ರೈತರಿಗೆ ಕನಿಷ್ಠ ಎಕರೆಗೆ ₹25,000–₹30,000 ಪರಿಹಾರ ನೀಡುವಂತೆ ಕ್ರಮ ಕೈಗೊಳ್ಳಬೇಕು ಎಂದು ಪ್ರಭಾಕರ ಪ್ರಭು ಒತ್ತಾಯಿಸಿದ್ದಾರೆ.



