Breaking
4 Oct 2026, Sun

ಲೇಡಿಗೋಷನ್ ಆಸ್ಪತ್ರೆಯಲ್ಲಿ ವಿಶ್ವ ಫಾರ್ಮಸಿಸ್ಟ್ಸ್ ದಿನಾಚರಣೆ: ಫಾರ್ಮಸಿ ಅಧಿಕಾರಿಗಳಿಗೆ ಗೌರವ ಪುರಸ್ಕಾರ

ಮಂಗಳೂರು: ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ವಿಶ್ವ ಫಾರ್ಮಸಿಸ್ಟ್ಸ್ ದಿನಾಚರಣೆಯನ್ನು ವಿನೂತನವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಆಸ್ಪತ್ರೆಯ ಫಾರ್ಮಸಿ ಅಧಿಕಾರಿಗಳ ವೃತ್ತಿ ನೈಪುಣ್ಯ, ಕರ್ತವ್ಯನಿಷ್ಠೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಗುರುತಿಸಿ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ದುರ್ಗಾಪ್ರಸಾದ್ ಎಂ.ಆರ್. ಮಾತನಾಡಿ, ಫಾರ್ಮಸಿ ಅಧಿಕಾರಿಗಳಿಗೆ ವೃತ್ತಿ ನೈಪುಣ್ಯತೆಯ ಜೊತೆಗೆ ಸಾಮಾಜಿಕ ಜವಾಬ್ದಾರಿಯ ಅರಿವು ಅಗತ್ಯ ಎಂದು ತಿಳಿಸಿದರು. ಅನುಭವಿ ಫಾರ್ಮಸಿಸ್ಟ್‌ಗಳ ಪ್ರೇರಣಾದಾಯಕ ಮನೋಭಾವ ಹಾಗೂ ಸಹಕಾರದಿಂದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಸಾರ್ವತ್ರಿಕ ಮೆಚ್ಚುಗೆ ಪಡೆದ ವಿಶಾಲವಾದ ಫಾರ್ಮಸಿ ಮತ್ತು ಮುಖ್ಯ ಉಗ್ರಾಣವನ್ನು ಪ್ರಾರಂಭಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ನಿವಾಸಿ ವೈದ್ಯಾಧಿಕಾರಿ ಡಾ. ಜಗದೀಶ್ ಅವರು ಫಾರ್ಮಸಿ ಅಧಿಕಾರಿಗಳ ಸಮರ್ಪಣಾ ಮನೋಭಾವವನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಹಿರಿಯ ಫಾರ್ಮಸಿ ಅಧಿಕಾರಿಗಳಾದ ಶ್ರೀಮತಿ ಸಂಧ್ಯಾ, ಶ್ರೀಮತಿ ಮಹಾಲಕ್ಷ್ಮಿ, ಶ್ರೀಮತಿ ಲಾವಣ್ಯ, ಶ್ರೀ ಮೋಹನ್ ದಾಸ್, ಶ್ರೀಮತಿ ಪುಷ್ಪಲತಾ ಹಾಗೂ ಶ್ರೀಮತಿ ರೇಖಾ ಮತ್ತು ಕಿರಿಯ ಫಾರ್ಮಸಿಸ್ಟ್‌ಗಳಾದ ಕುಮಾರಿ ಅಕ್ಷತಾ, ಕುಮಾರಿ ರಿಶಾನಾ ಹಾಗೂ ಶ್ರೀಮತಿ ಸಕೀನಾ ಅವರನ್ನು ಅವರ ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಮತ್ತು ಶ್ರದ್ಧಾಪೂರ್ವಕ ಸರ್ಕಾರಿ ಸೇವೆಯನ್ನು ಗುರುತಿಸಿ ಹೂಹಾರ, ಶಾಲು, ಫಲಪುಷ್ಪ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ಫಾರ್ಮಸಿ ಅಧಿಕಾರಿಗಳು, ತಮ್ಮ ಸುದೀರ್ಘ ವೃತ್ತಿ ಜೀವನದಲ್ಲಿ ಹಿಂದೆಂದೂ ಅನುಭವಿಸದ ರೀತಿಯಲ್ಲಿ ತಮ್ಮ ಸೇವೆಯನ್ನು ಗುರುತಿಸಿ ಗೌರವಿಸಿದ ಈ ಕ್ಷಣಗಳು ಅನಿರ್ವಚನೀಯ ಹಾಗೂ ಚಿರಸ್ಮರಣೀಯವಾಗಿವೆ ಎಂದು ಅಭಿಪ್ರಾಯಪಟ್ಟರು. ಇಂತಹ ಅಭಿಮಾನದ ಕಾರ್ಯಕ್ರಮಗಳು ಸಿಬ್ಬಂದಿಯಲ್ಲಿ ವೃತ್ತಿಪರ ಸ್ಫೂರ್ತಿಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಹಿರಿಯ ಪ್ರಸೂತಿ ತಜ್ಞ ಡಾ. ದಯಾನಂದ್, ಮಕ್ಕಳ ತಜ್ಞೆ ಡಾ. ಮನಿಷಾ, ಸಹಾಯಕ ಆಡಳಿತಾಧಿಕಾರಿ ಶ್ರೀಮತಿ ಅನಿತಾ ಸತ್ಯನ್, ನರ್ಸಿಂಗ್ ಸುಪರಿಂಟೆಂಡೆಂಟ್ ಶ್ರೀಮತಿ ಗೀತಾ, ಕೆ.ಎಂ.ಸಿ. ನರ್ಸಿಂಗ್ ಸೂಪರ್‌ವೈಸರ್ ಶ್ರೀಮತಿ ಮಲ್ಲಿಕಾ ಹಾಗೂ ಆಫೀಸ್ ಸುಪರಿಂಟೆಂಡೆಂಟ್ ಶ್ರೀ ಶಂಕರ್ ಉಪಸ್ಥಿತರಿದ್ದರು.

ಶುಶ್ರೂಷಾಧಿಕಾರಿ ಶ್ರೀಮತಿ ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಹಿರಿಯ ಶುಶ್ರೂಷಾಧಿಕಾರಿ ಶ್ರೀಮತಿ ಮಹಾಲಕ್ಷ್ಮಿ ಸ್ವಾಗತಿಸಿದರು. ಶುಶ್ರೂಷಾಧಿಕಾರಿ ಶ್ರೀಮತಿ ಸರೋಜಾ ವಂದಿಸಿದರು. ಅಪೂರ್ವ ಪ್ರಾರ್ಥನೆ ನೆರವೇರಿಸಿದರು. ಶ್ರೀಮತಿ ಭವ್ಯಾ ಹಾಗೂ ಹೇಮಂತ್ ತಾಂತ್ರಿಕ ಸಹಕಾರ ನೀಡಿದರು.

Leave a Reply

Your email address will not be published. Required fields are marked *