Breaking
5 Oct 2026, Mon

ಬಂಟ್ವಾಳದಲ್ಲಿ ಸಿಡಿಲು ಬಡಿದು ಮನೆ ಸಂಪೂರ್ಣ ಹಾನಿ; ಮಹಿಳೆಗೆ ಗಂಭೀರ ಗಾಯ

ಬಂಟ್ವಾಳ: ತಾಲೂಕಿನ ಅಜ್ಜಿಬೆಟ್ಟು ಗ್ರಾಮದ ಅನಿಲ್ದಡ್ಡ ಎಂಬಲ್ಲಿ ಸೋಮವಾರ ಮುಂಜಾನೆ ಸಿಡಿಲು ಬಡಿದು ಮನೆಯೊಂದು ಸಂಪೂರ್ಣ ಹಾನಿಗೊಂಡಿದ್ದು, ಮನೆಯಲ್ಲಿದ್ದ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

ಅನಿಲ್ದಡ್ಡ ನಿವಾಸಿ ನಾಗೇಶ್ ಕುಲಾಲ್ ಅವರ ಮನೆಗೆ ಮುಂಜಾನೆ ಸಿಡಿಲು ಬಡಿದಿದ್ದು, ಘಟನೆಯ ತೀವ್ರತೆಗೆ ಮನೆಯ ಕಟ್ಟಡಕ್ಕೆ ಭಾರೀ ಹಾನಿಯಾಗಿದೆ. ಮನೆಯೊಳಗಿದ್ದ ವಿದ್ಯುತ್ ಉಪಕರಣಗಳು ಸೇರಿದಂತೆ ಹಲವು ವಸ್ತುಗಳು ಹಾನಿಗೊಂಡಿವೆ ಎನ್ನಲಾಗಿದೆ.

ಸಿಡಿಲು ಬಡಿದ ಪರಿಣಾಮ ನಾಗೇಶ್ ಕುಲಾಲ್ ಅವರ ಪತ್ನಿ ಕುಸಲಾಕ್ಷಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಾಗೇಶ್ ಕುಲಾಲ್ ಅವರು ಬಸ್ ಚಾಲಕರಾಗಿದ್ದು, ದಂಪತಿಗೆ ಮಕ್ಕಳಿಲ್ಲ ಎಂದು ತಿಳಿದುಬಂದಿದೆ. ಘಟನೆಯಿಂದ ಕುಟುಂಬ ತೀವ್ರ ಆತಂಕಕ್ಕೆ ಒಳಗಾಗಿದೆ.

ವಿಷಯ ತಿಳಿಯುತ್ತಿದ್ದಂತೆ ಶಾಸಕ ರಾಜೇಶ್ ನಾಯ್ಕ್ ಅವರು ತಹಸೀಲ್ದಾರ್ ಅವರೊಂದಿಗೆ ಮಾತನಾಡಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮನೆಗೆ ಉಂಟಾದ ನಷ್ಟದ ಅಂದಾಜು ಮಾಡಬೇಕಾಗಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ದಿನೇಶ್ ದಂಬೆದಾರ್ ಅವರು ಸ್ಥಳಕ್ಕೆ ತೆರಳಿ ಘಟನೆಯ ವಿವರಗಳನ್ನು ನೀಡಿದ್ದಾರೆ.

Leave a Reply

Your email address will not be published. Required fields are marked *