ಕಾಸರಗೋಡು: ವೆಸ್ಟ್ ಎಳೇರಿ ಗ್ರಾಮದ ವರಕ್ಕಾಡ್ ಜಂಕ್ಷನ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬೋರ್‌ವೆಲ್ ಲಾರಿಯೊಂದು ರಸ್ತೆಬದಿಯ ಮನೆಯ ಮೇಲೆ ಮಗುಚಿ ಬಿದ್ದ ಪರಿಣಾಮ ಇಬ್ಬರು ವಲಸೆ ಕಾರ್ಮಿಕರು ಮೃತಪಟ್ಟ ಘಟನೆ ಶನಿವಾರ(ಅ.03) ಮುಂಜಾನೆ ನಡೆದಿದೆ.

ಮೃತರನ್ನು ಮಧ್ಯಪ್ರದೇಶದ ದೇವೇಂದ್ರನ್ ಹಾಗೂ ಛತ್ತೀಸ್‌ಗಢದ ಮನಾಸಿರ್ ಎಂದು ಗುರುತಿಸಲಾಗಿದೆ. ಇಬ್ಬರೂ ಬೋರ್‌ವೆಲ್ ಲಾರಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ಬೋರ್‌ವೆಲ್ ಕೊರೆತ ಕೆಲಸ ಮುಗಿಸಿ ಹಿಂತಿರುಗುತ್ತಿದ್ದ ಲಾರಿ, ವರಕ್ಕಾಡ್ ಜಂಕ್ಷನ್ ಬಳಿಯ ಕಡಿದಾದ ಇಳಿಜಾರು ರಸ್ತೆಯಲ್ಲಿ ಸಾಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿಯ ಜೇಸನ್ ಎಂಬುವರಿಗೆ ಸೇರಿದ ಮನೆಯ ಮೇಲೆ ಮಗುಚಿ ಬಿದ್ದಿದೆ.

ಅಪಘಾತದ ಪರಿಣಾಮ ಲಾರಿಯಲ್ಲಿದ್ದ ಇಬ್ಬರು ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಲಾರಿ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯ ಛಾವಣಿಯ ಒಂದು ಭಾಗ ಸಂಪೂರ್ಣವಾಗಿ ಕುಸಿದುಬಿದ್ದಿದೆ. ಘಟನೆಯ ವೇಳೆ ಮನೆಯೊಳಗಿದ್ದ ಜೇಸನ್ ಹಾಗೂ ಕುಟುಂಬದ ಸದಸ್ಯರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ.

ಲಾರಿಯಲ್ಲಿದ್ದ ಭಾರೀ ತೂಕದ ಕ್ರೇನ್ ಭಾಗವು ಮನೆಯ ತಾರಸಿಯ ಬದಿಗೆ ಸಿಲುಕಿಕೊಂಡಿದ್ದರಿಂದ ಮತ್ತಷ್ಟು ದೊಡ್ಡ ಅನಾಹುತ ತಪ್ಪಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಧಾವಿಸಿ ಲಾರಿಯನ್ನು ತೆರವುಗೊಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.


