ಬಂಟ್ವಾಳ: ಮಹಾತ್ಮಾ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ತಮ್ಮ ಆದರ್ಶ ಜೀವನದ ಮೂಲಕ ಭಾರತಕ್ಕೆ ಜಗತ್ತಿನಾದ್ಯಂತ ಗೌರವ ತಂದುಕೊಟ್ಟ ಶ್ರೇಷ್ಠ ನಾಯಕರು ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.

ನರಿಕೊಂಬು ಗ್ರಾಮದ ನಿನ್ನಿಪಡ್ಪು ಪರಿಶಿಷ್ಟ ಕಾಲೊನಿಯಲ್ಲಿ ಗಾಂಧಿ ಜಯಂತಿ ಅಂಗವಾಗಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ, ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿಗಳ ಸಹಭಾಗಿತ್ವದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಸ್ವಚ್ಛತಾ ಆಂದೋಲನ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಪ್ರಸ್ತುತ ರಾಜ್ಯ ಸರ್ಕಾರವು ಪರಿಶಿಷ್ಟ ಸಮುದಾಯದ ಅಲೇರಿ ಮೂಲಸ್ಥಾನದ ಅಭಿವೃದ್ಧಿಗೆ ₹10 ಕೋಟಿ ಅನುದಾನ ನೀಡುವುದರ ಜೊತೆಗೆ ಅರ್ಹ ಫಲಾನುಭವಿಗಳಿಗೆ ಡಿ.ಸಿ.ಮನ್ನಾ ಜಮೀನು ಒದಗಿಸಲು ಮಹತ್ವದ ತೀರ್ಮಾನ ಕೈಗೊಂಡಿರುವುದು ಸ್ವಾಗತಾರ್ಹ ಎಂದು ರಮಾನಾಥ ರೈ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಹಮ್ಮದ್ ಆಲಿ ಪುತ್ತೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ನಿನ್ನಿಪಡ್ಪುವಿನಲ್ಲಿ ಗಾಂಧಿ ಜಯಂತಿ ಆಚರಣೆಯನ್ನು ಸ್ವಚ್ಛತಾ ಆಂದೋಲನದ ಮೂಲಕ ನಡೆಸಿರುವುದು ಗಾಂಧೀಜಿ ಅವರ ಸಂದೇಶಕ್ಕೆ ಪೂರಕ ಹಾಗೂ ಅರ್ಥಪೂರ್ಣವಾಗಿದೆ ಎಂದರು.

ಕೆಪಿಸಿಸಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಸದಸ್ಯ ಪಿಯೂಸ್ ಎಲ್. ರಾಡ್ರಿಗಸ್, ಬೂಡ ಬೇಬಿ ಕುಂದರ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ತಾ.ಪಂ. ಮಾಜಿ ಅಧ್ಯಕ್ಷ ಕೆ. ಪದ್ಮನಾಭ ರೈ, ಮಾಜಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ಮಹಿಳಾ ಕಾಂಗ್ರೆಸ್ ಘಟಕ ಅಧ್ಯಕ್ಷೆ ಐಡಾ ಸುರೇಶ್ ಹಾಗೂ ಜಿಲ್ಲಾ ಮುಖಂಡ ಚಿತ್ತರಂಜನ್ ಶೆಟ್ಟಿ ಮಾತನಾಡಿದರು.

ನಿನ್ನಿಪಡ್ಪು ದೈವಸ್ಥಾನ ಸಮಿತಿ ಅಧ್ಯಕ್ಷ ಮೋನಪ್ಪ ನಿನ್ನಿಪಡ್ಪು, ಮಹಮ್ಮದ್ ನಂದಾವರ, ಆಲ್ಫೋನ್ಸ್ ಮಿನೆಜಸ್, ಆಲ್ಬರ್ಟ್ ಮಿನೆಜಸ್, ಆನಂದ ಸಾಲ್ಯಾನ್, ಉಮೇಶ್ ನೆಲ್ಲಿಗುಡ್ಡೆ, ರವೀಂದ್ರ ಸಪಲ್ಯ, ಪ್ರಸಾದ್ ಗಾಣಿಗ, ಸಿರಾಜ್ ಮದಕ, ಅಬ್ದುಲ್ ರಝಾಕ್ ಕೊಳ್ನಾಡು, ಇಕ್ಬಾಲ್, ಸಮದ್ ಕೈಕಂಬ, ಮೋಹನ್ ಚೆಂಡ್ತಿಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬಂಟ್ವಾಳ ವಿಧಾನಸಭಾ ಕ್ಷೇತ್ರ ಪ್ರಚಾರ ಸಮಿತಿ ಅಧ್ಯಕ್ಷ ಉಮೇಶ್ ಬೋಳಂತೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಾಣೆಮಂಗಳೂರು ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಎ.ಬಿ. ಅಬ್ದುಲ್ಲಾ ವಂದಿಸಿದರು.


