ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಮಳೆ ಕೊರತೆ, ಕುಡಿಯುವ ನೀರಿನ ಅಭಾವ ಹಾಗೂ ಕೃಷಿ ನಷ್ಟದಿಂದ ಉಂಟಾಗಿರುವ ಸಂಕಷ್ಟಕ್ಕೆ ಸರ್ಕಾರ ಅಧಿಕೃತ ಸ್ಪಂದನೆ ನೀಡಿದೆ. ಬೆಳ್ತಂಗಡಿ, ಬಂಟ್ವಾಳ ಹಾಗೂ ಉಳ್ಳಾಲ ತಾಲೂಕುಗಳನ್ನು ಮಧ್ಯಮ ಪ್ರಮಾಣದ ಬರಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರ ಘೋಷಿಸಿ ಆದೇಶ ಹೊರಡಿಸಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ನಡೆಸಿದ ವೈಜ್ಞಾನಿಕ ಉಪಗ್ರಹ ಸಮೀಕ್ಷೆ ಹಾಗೂ ‘ಗ್ರೌಂಡ್ ಟ್ರೂಥಿಂಗ್’ ಆಧಾರದ ಮೇಲೆ ಕಂದಾಯ ಇಲಾಖೆಯ ವಿಪತ್ತು ನಿರ್ವಹಣಾ ವಿಭಾಗವು ಅ.1ರಂದು ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಹೆಚ್ಚುವರಿಯಾಗಿ ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಗೊಂಡ 40 ತಾಲೂಕುಗಳ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯ ಈ ಮೂರು ತಾಲೂಕುಗಳೂ ಸೇರಿವೆ.
ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಬೆಳ್ತಂಗಡಿ ಶಾಸಕರು ತಾಲೂಕಿನ ಕೃಷಿಕರು ಎದುರಿಸುತ್ತಿರುವ ಮಳೆ ಕೊರತೆ, ನೀರಿನ ಅಭಾವ ಹಾಗೂ ಬೆಳೆ ನಷ್ಟದ ಕುರಿತು ಸರ್ಕಾರದ ಗಮನ ಸೆಳೆದಿದ್ದರು.

ಬೆಳ್ತಂಗಡಿ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಅಂತರ್ಜಲ ಮಟ್ಟ ಕುಸಿತ ಹಾಗೂ ಅಡಿಕೆ, ತೆಂಗು, ರಬ್ಬರ್ ಮತ್ತು ಭತ್ತದ ಬೆಳೆಗಳಿಗೆ ಹಾನಿಯಾಗಿರುವ ಹಿನ್ನೆಲೆಯಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಿ ಬರಪೀಡಿತ ತಾಲೂಕು ಎಂದು ಘೋಷಿಸಬೇಕು ಹಾಗೂ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಶಾಸಕರು ಆಗ್ರಹಿಸಿದ್ದರು.
ಶಾಸಕರ ನಿರಂತರ ಒತ್ತಡ ಹಾಗೂ ಸರ್ಕಾರದ ಮಟ್ಟದಲ್ಲಿ ನಡೆಸಿದ ಪ್ರಯತ್ನಗಳ ಫಲವಾಗಿ ಇದೀಗ ಬರಪೀಡಿತ ತಾಲೂಕುಗಳ ಘೋಷಣೆ ಹೊರಬಿದ್ದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಬರಪೀಡಿತ ತಾಲೂಕುಗಳಲ್ಲಿ ಉಂಟಾಗಿರುವ ಬೆಳೆ ನಷ್ಟದ ಕುರಿತು ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾಡಳಿತದ ನೇತೃತ್ವದಲ್ಲಿ ಜಂಟಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರ ಸೂಚಿಸಿದೆ.
ರಾಜ್ಯ ವಿಪತ್ತು ಪರಿಹಾರ ನಿಧಿ (SDRF) ಮಾನದಂಡಗಳ ಅನ್ವಯ ಬರ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಹಾಗೂ ಅರ್ಹ ರೈತರಿಗೆ ಪರಿಹಾರ ಒದಗಿಸಲು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರಕ್ಕೆ ಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿದೆ.

ಇದರೊಂದಿಗೆ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸುವುದು ಹಾಗೂ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಅವಕಾಶ ದೊರೆತಿದೆ.
ಬೆಳ್ತಂಗಡಿ, ಬಂಟ್ವಾಳ ಹಾಗೂ ಉಳ್ಳಾಲ ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಿರುವುದಕ್ಕೆ ಜಿಲ್ಲೆಯ ರೈತರು ಹಾಗೂ ಸಾರ್ವಜನಿಕರು ಸಂತಸ ವ್ಯಕ್ತಪಡಿಸಿದ್ದು, ರೈತರ ಪರವಾಗಿ ವಿಧಾನಸಭೆಯಲ್ಲಿ ಧ್ವನಿ ಎತ್ತಿದ ಶಾಸಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.



