Breaking
2 Oct 2026, Fri

ಅಲೇರಿ ಮೂಲಕ್ಷೇತ್ರ ಅಭಿವೃದ್ಧಿಗೆ ₹10 ಕೋಟಿ ಅನುದಾನ: ಸಚಿವ ಕೆ.ಎಚ್. ಮುನಿಯಪ್ಪ

ಬೆಂಗಳೂರು: ಕರಾವಳಿ ಮೂಲದ ಶ್ರೀ ಸತ್ಯ ಸಾರಮಾನಿ, ಕಾನದ ಕಟ್ಟದರನ್ನು ಕುಲದೈವಗಳಾಗಿ ಆರಾಧಿಸುವ ಆದಿದ್ರಾವಿಡ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ಹಾಗೂ ಅಲೇರಿ ಮೂಲಕ್ಷೇತ್ರದ ಅಭಿವೃದ್ಧಿಗೆ ಅನುದಾನ ನೀಡುವ ಕುರಿತು ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಅವರೊಂದಿಗೆ ಬೆಂಗಳೂರಿನ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಗುರುವಾರ ವಿಶೇಷ ಸಂವಾದ ನಡೆಯಿತು.

ಸಂವಾದದಲ್ಲಿ ಮಾತನಾಡಿದ ಸಚಿವ ಕೆ.ಎಚ್. ಮುನಿಯಪ್ಪ, ಅಲೇರಿ ಕ್ಷೇತ್ರವು ಐತಿಹಾಸಿಕ ಹಿನ್ನೆಲೆಯುಳ್ಳ ಕ್ಷೇತ್ರವಾಗಿದ್ದು, ಕೇವಲ ಧಾರ್ಮಿಕ ಕ್ಷೇತ್ರವಾಗಿ ಉಳಿಯದೆ ಸಮುದಾಯದ ಶಕ್ತಿಕೇಂದ್ರವಾಗಿ ರೂಪುಗೊಳ್ಳಬೇಕು ಎಂದರು.

ಕ್ಷೇತ್ರದಲ್ಲಿ ತರಬೇತಿ ಕೇಂದ್ರ, ಸಮುದಾಯ ಭವನ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ಧಿಗೆ ಅಗತ್ಯವಿರುವ ₹10 ಕೋಟಿ ಅನುದಾನ ಬಿಡುಗಡೆ ಮಾಡಲು ಸರ್ಕಾರ ಬದ್ಧವಾಗಿದೆ. ಈ ಕುರಿತು ಶೀಘ್ರವೇ ವಿಸ್ತೃತ ಯೋಜನಾ ವರದಿ ಸಲ್ಲಿಸುವಂತೆ ಸೂಚಿಸಿದರು. ಅಲ್ಲದೆ, ಕ್ಷೇತ್ರಕ್ಕೆ ಜಮೀನು ಖರೀದಿಸಲು ಸಹ ಸೂಕ್ತ ಅನುದಾನ ನೀಡುವುದಾಗಿ ತಿಳಿಸಿದರು.

ಆದಿದ್ರಾವಿಡ ಸಮುದಾಯದ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಸೂಕ್ತ ಅನುದಾನ ಬಿಡುಗಡೆ ಮಾಡಲಾಗುವುದು. ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಕೇಂದ್ರದ ಮೂಲಕ ಈ ಅಧ್ಯಯನ ನಡೆಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದರು.

ಡಿಸಿ ಮನ್ನಾ ಜಮೀನು ಹಂಚಿಕೆಗಾಗಿ ಮೂರುವರೆ ದಶಕಗಳಿಂದ ಹೋರಾಟ ನಡೆಸಲಾಗುತ್ತಿದ್ದು, ಈ ಕುರಿತು ಪ್ರಣಾಳಿಕೆಯಲ್ಲೂ ವಾಗ್ದಾನ ಮಾಡಲಾಗಿದೆ ಎಂದು ಮುಖಂಡರು ಸಚಿವರ ಗಮನಕ್ಕೆ ತಂದರು. ಇದಕ್ಕೆ ಸ್ಪಂದಿಸಿದ ಸಚಿವ ಕೆ.ಎಚ್. ಮುನಿಯಪ್ಪ, ಡಿಸಿ ಮನ್ನಾ ಜಮೀನು ಹಂಚಿಕೆ ಮಾಡುವ ಕುರಿತು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ತಕ್ಷಣ ಆದೇಶ ನೀಡುವುದಾಗಿ ತಿಳಿಸಿದರು.

ಅಲೇರಿ ಮೂಲಕ್ಷೇತ್ರದಲ್ಲಿ ಧಾರ್ಮಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕ ಚಟುವಟಿಕೆಗಳಿಗೂ ಆದ್ಯತೆ ನೀಡುವ ಅಗತ್ಯವಿದೆ ಎಂದು ಸಚಿವರು ಹೇಳಿದರು. ಕ್ಷೇತ್ರದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅಧ್ಯಯನ ಕೇಂದ್ರ ಸ್ಥಾಪಿಸಲು ಸೂಕ್ತ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.

ಸಂವಾದದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ರಕ್ಷಿತ್ ಶಿವರಾಂ, ಮಿಥುನ್ ರೈ, ಸುಳ್ಯದ ಕಾಂಗ್ರೆಸ್ ಮುಖಂಡ ಜಿ. ಕೃಷ್ಣಪ್ಪ, ಆದಿದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಗಣೇಶ್ ಪ್ರಸಾದ್ ಮೂಡಬಿದಿರೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶೇಖರ್ ಕುಕ್ಕೇಡಿ, ದ.ಕ. ಜಿಲ್ಲಾಧ್ಯಕ್ಷ ಶ್ರೀನಿವಾಸ್ ಅರ್ಬಿಗುಡ್ಡೆ, ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ನೀಲಯ್ಯ ಗಾಳಿಗುಡ್ಡೆ, ಗೌರವಾಧ್ಯಕ್ಷ ಸುರೇಶ್ ಹಾರ್ಡಿಕೊಪ್ಪ, ರಾಜ್ಯ ಉಪಾಧ್ಯಕ್ಷ ಕೃಷ್ಣಪ್ಪ ಜಾವಳಿ, ಮುಖಂಡರಾದ ಚಂದ್ರಪ್ಪ ಮದ್ದಡ್ಕ, ಶೇಖರ್ ವಿ ಧರ್ಮಸ್ಥಳ, ಮಾಧವ ಕಡೆಶಿವಾಲಯ, ಆನಂದ ಹಟ್ಟತ್ತೊಡಿ, ಲಿಂಗಪ್ಪ ಕೈಲಾರ್ ಕಾವಳಕಟ್ಟೆ ಶ್ರೀನಿವಾಸ್ ಪಾಲ್ಯ, ಶಿವರಾಮ ಆನಡ್ಕ, ಗಣೇಶ್ ಬೆಳುವಾಯಿ, ಶಿವಾನಂದ ಪಡಂಗಡಿ, ಯತೀಶ್ ಧರ್ಮಸ್ಥಳ, ಸುಕೇಶ್ ಮಾಲಾಡಿ, ಓಬಯ್ಯ ಆರಂಬೋಡಿ, ಮೋಹಿತ್ ಹಿರೆಬೈಲು, ಸುರೇಶ್ ಧರ್ಮಸ್ಥಳ, ಸುರೇಶ್ ಕಜೆಕಾರು, ಶೇಖರ್ ಲಾಯಿಲ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *