ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಬಡಗಕಜೇಕಾರಿನಲ್ಲಿ ಕೆ.ವೈ. ಪೂಜಾರಿ ಕುಟುಂಬಿಕರ ಸಹಕಾರದಲ್ಲಿ ಆಯೋಜಿಸಿರುವ ಮೂರು ದಿನಗಳ ವ್ಯಕ್ತಿತ್ವ ವಿಕಸನ ಶಿಬಿರಕ್ಕೆ ಸೆಪ್ಟೆಂಬರ್ 30ರಂದು ಚಾಲನೆ ನೀಡಲಾಯಿತು.

ಸೆಪ್ಟೆಂಬರ್ 30ರಿಂದ ಅಕ್ಟೋಬರ್ 2ರವರೆಗೆ ನಡೆಯಲಿರುವ ಶಿಬಿರವನ್ನು ಉಳಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ರವಿ ಉದ್ಘಾಟಿಸಿ, ವಿದ್ಯಾರ್ಥಿಗಳು ಶಿಬಿರದ ವಿವಿಧ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೆ.ವೈ. ಪೂಜಾರಿ ಕುಟುಂಬಿಕರಾದ ನಿವೃತ್ತ ವಿಂಗ್ ಕಮಾಂಡರ್ ಕರುಣಾಮಯಿ ಕಜೇಕಾರು ಉಪಸ್ಥಿತರಿದ್ದರು.
ಶಿಬಿರದ ಮೊದಲ ದಿನ ಟಿಜಿಟಿ ಶಿಕ್ಷಕ ಹರೀಶ ಮೂಲ್ಯ ಅವರು ‘ಭಾಷಣ ಕಲೆ’ ಹಾಗೂ ‘ಆಟಿಕೆಯಲ್ಲಿ ವಿಜ್ಞಾನ’ ವಿಷಯಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು. ಪವಿತ್ರ ಬಿ.ಕೆ. ಅವರು ರಂಗೋಲಿ ಬಿಡಿಸುವ ಕಲೆಯನ್ನು ಪರಿಚಯಿಸಿದರೆ, ಪೂರ್ಣಿಮಾ ಅವರು ವಿದ್ಯಾರ್ಥಿಗಳಿಗೆ ನೃತ್ಯಭರಿತ ಹಾಡುಗಳನ್ನು ಕಲಿಸಿದರು.

ಶಾಲಾ ಮುಖ್ಯ ಶಿಕ್ಷಕಿ ಹೇಮಾವತಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗೌರವ ಶಿಕ್ಷಕಿ ರೂಪಾ ವಂದಿಸಿದರು. ಗೌರವ ಶಿಕ್ಷಕಿ ಪವಿತ್ರ ಬಿ.ಕೆ. ಕಾರ್ಯಕ್ರಮ ನಿರೂಪಿಸಿದರು.



