Breaking
29 Sep 2026, Tue

ಮಾಣಿ ಫ್ಲೈಓವರ್ನಲ್ಲಿ ಭೀಕರ ಅಪಘಾತ: ಮಹಿಳೆ ಮೃತ್ಯು, ಮೂವರಿಗೆ ಗಂಭೀರ ಗಾಯ

ಬಂಟ್ವಾಳ: ಆಲ್ಟೋ ಕಾರು ಹಾಗೂ ಟೆಂಪೋ ಪಿಕಪ್ ವಾಹನಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದು, ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ಬೆಳಗ್ಗೆ ಸುಮಾರು 6 ಗಂಟೆಗೆ ಮಾಣಿ ಫ್ಲೈಓವರ್ನಲ್ಲಿ ನಡೆದಿದೆ.


ಮಡಿಕೇರಿ ನಿವಾಸಿ ನಬೀಶ್ (55) ಮೃತಪಟ್ಟವರು ಎಂದು ತಿಳಿದುಬಂದಿದೆ. ನಾಲ್ವರು ಮಹಿಳೆಯರು ಹಾಗೂ ಚಾಲಕ ಆಲ್ಟೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಇವರು ಉಮ್ರಾ ತರಗತಿ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ.


ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಮೂವರು ಮಹಿಳೆಯರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.


ಸರ್ವಿಸ್ ರಸ್ತೆ ಅವ್ಯವಸ್ಥೆ ಬಗ್ಗೆ ಸ್ಥಳೀಯರ ಆಕ್ಷೇಪ:

ಮಾಣಿ ಫ್ಲೈಓವರ್ನಿಂದ ಪುತ್ತೂರು–ಮಡಿಕೇರಿ–ಮೈಸೂರು ರಸ್ತೆಗೆ ಪ್ರವೇಶಿಸಲು ಇರುವ ಸರ್ವಿಸ್ ರಸ್ತೆಯ ವ್ಯವಸ್ಥೆ ಗೊಂದಲದಿಂದ ಕೂಡಿದ್ದು, ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ಹಿಂದಿನಿಂದಲೂ ಆರೋಪಿಸುತ್ತಿದ್ದಾರೆ.


ಹೊರಗಿನಿಂದ ಬರುವ ವಾಹನ ಚಾಲಕರಿಗೆ ಮಡಿಕೇರಿ–ಮೈಸೂರು ಕಡೆಗೆ ತೆರಳುವ ಪ್ರವೇಶ ರಸ್ತೆ ಯಾವುದು ಎಂಬುದು ಸ್ಪಷ್ಟವಾಗಿ ತಿಳಿಯದಿರುವುದರಿಂದ ವಾಹನ ಸಂಚಾರದಲ್ಲಿ ಗೊಂದಲ ಉಂಟಾಗುತ್ತಿದೆ. ಕಿರಿದಾದ ಪ್ರವೇಶ ರಸ್ತೆ ಸರಿಯಾಗಿ ಗೋಚರಿಸದಿರುವುದು ಹಾಗೂ ಸೂಕ್ತ ಸೂಚನಾ ಫಲಕಗಳ ಕೊರತೆ ಕೂಡ ಸಮಸ್ಯೆಯನ್ನು ಮತ್ತಷ್ಟು ಗಂಭೀರಗೊಳಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಅಪಘಾತದ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಸರ್ವಿಸ್ ರಸ್ತೆಯ ಸಂಚಾರ ವ್ಯವಸ್ಥೆ ಹಾಗೂ ಸೂಚನಾ ಫಲಕಗಳ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *