Breaking
24 Sep 2026, Thu

ಪತ್ನಿಯ ಮೃತದೇಹ ಕೆರೆಯಲ್ಲಿ ಪತ್ತೆ; ಬೆನ್ನಲ್ಲೇ ಪತಿ ನೇಣಿಗೆ ಶರಣು

ಬೆಳ್ತಂಗಡಿ: ಪತ್ನಿಯ ಮೃತದೇಹ ತೋಟದ ಕೆರೆಯಲ್ಲಿ ನಿಗೂಢ ರೀತಿಯಲ್ಲಿ ಪತ್ತೆಯಾದ ಬೆನ್ನಲ್ಲೇ ಪತಿಯೂ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದಲ್ಲಿ ನಡೆದಿದೆ.


ಶಿಶಿಲ ಗ್ರಾಮದ ಗುಂಡಿಕ್ಕಾಡು ನಿವಾಸಿ ತನಿಯಪ್ಪ ಗೌಡ (ವಯಸ್ಸು ತಿಳಿದುಬಂದಿಲ್ಲ) ಆತ್ಮಹತ್ಯೆಗೆ ಶರಣಾದವರು.
ತನಿಯಪ್ಪ ಗೌಡ ಅವರು ಕಳೆದ ಎರಡು-ಮೂರು ದಿನಗಳಿಂದ ಯಾರಿಗೂ ಕಾಣಿಸಿಕೊಳ್ಳದೆ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಶೋಧ ಕಾರ್ಯ ನಡೆಸಿದ್ದು, ಬಳಿಕ ಅವರು ತಮ್ಮ ನಿವಾಸದೊಳಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತಪಟ್ಟು ಪತ್ತೆಯಾಗಿದ್ದಾರೆ.


ಇದಕ್ಕೂ ಕೆಲವೇ ದಿನಗಳ ಹಿಂದೆ ತನಿಯಪ್ಪ ಗೌಡ ಅವರ ಪತ್ನಿ ಚಿನ್ನಮ್ಮ ಅವರ ಮೃತದೇಹ ಪಕ್ಕದ ಜಮೀನಿನ ಕೆರೆಯಲ್ಲಿ ಪತ್ತೆಯಾಗಿತ್ತು. ಚಿನ್ನಮ್ಮ ಅವರ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗಿದ್ದು, ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಚಿನ್ನಮ್ಮ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅವರ ಸಹೋದರ ಗಂಗಾಧರ ಗೌಡ ಅವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಇದೀಗ ಪತಿಯೂ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿರುವುದು ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಮೂಡಿಸಿದೆ. ಘಟನಾ ಸ್ಥಳಕ್ಕೆ ಸ್ಥಳೀಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದಂಪತಿಯ ಸಾವಿನ ಹಿನ್ನೆಲೆಯಲ್ಲಿ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *