ವಿಟ್ಲ: ವಿಟ್ಲ ಪಟ್ಟಣ ಪಂಚಾಯತಿ ಸಾಮಾನ್ಯ ಸಭೆ ಜ. 30ರಂದು ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ವಿಟ್ಲ ಖಾಸಗಿ ಬಸ್ ಸ್ಟ್ಯಾಂಡ್ ಬಳಿಯಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ರಸ್ತೆಯ ತನಕ ಸರಪಳಿ ಅಳವಡಿಸಿರುವುದನ್ನು ತಕ್ಷಣ ತೆರವುಗೊಳಿಸಲು ಮತ್ತು ಅನಧಿಕೃತವಾಗಿ ಚರಂಡಿಯ ಮೇಲೆಯೂ ಕಟ್ಟಡ ನಿರ್ಮಿಸಿರುವುದರ ಮೇಲೆ ಕಟ್ಟಡ ಮಾಲಕರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕು ಎಂದು ವಿಟ್ಲ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸರ್ವಾನುಮತದ ಒತ್ತಾಯ ನಡೆಸಲಾಯಿತು.ವಿಟ್ಲ ಪೇಟೆಯ ದಿನನಿತ್ಯದ ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಸದಸ್ಯರು ಒಕ್ಕೊರಲ ಆಗ್ರಹ ನಡೆಸಿದರು.
ಸಭೆಯು ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ಸದಸ್ಯ ವಿಕೆಎಂ ಆಶ್ರಫ್ ಪುತ್ತೂರು ರಸ್ತೆಯಲ್ಲಿರುವ ಕಟ್ಟಡವೊಂದರ ಮಾಲಕರು ಕಟ್ಟಡದ ಅಂದಕ್ಕೆ ಹಾಕಿರುವ ಚೈನ್ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿದೆ. ಇದನ್ನು ತಕ್ಷಣ ತೆರವು ಮಾಡದಿದ್ದರೆ ಇತರ ಕಟ್ಟಡ ಮಾಲಕರೂ ಇದನ್ನು ಅನುಸರಿಸಬಹುದು. ಆದ್ದರಿಂದ ತಕ್ಷಣ ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ಆಡಳಿತ ಪಕ್ಷದ ಸದಸ್ಯರಾದ ಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷ ಅರುಣ್ ಎಂ.ವಿಟ್ಲ, ಜಯಂತ್ ಮತ್ತಿತರರು ಇದಕ್ಕೆ ಧ್ವನಿಗೂಡಿಸಿದರು. ಎಲ್ಲಾ ಸದಸ್ಯರಿಂದ ಸಹಮತ ವ್ಯಕ್ತವಾಯಿತು.ಮುಂದಿನ ಸಭೆಯ ಮೊದಲು ಸಮಸ್ಯೆಯನ್ನು ಸರಿಪಡಿಸಲಾಗುವುದು ಎಂದು ಅಧ್ಯಕ್ಷರು ಭರವಸೆ ನೀಡಿದರು.
ವಿಟ್ಲ ಪೇಟೆಯಲ್ಲಿ ನಿತ್ಯವೂ ಟ್ರಾಫಿಕ್ ಸಮಸ್ಯೆ. ಇದರಿಂದ ಜನರು ಹೈರಾಣಾಗಿದ್ದಾರೆ. ಈ ಕಿರಿಕಿರಿ ತಪ್ಪಿಸಿ ಎಂದು ವಿಪಕ್ಷ ಸದಸ್ಯ ಹಸೈನಾರ್ ನೆಲ್ಲಿಗುಡ್ಡೆ ಆಗ್ರಹಿಸಿದರು. ಹೆಲ್ಮೆಟ್ ಹಾಕದವರನ್ನು ನಾಲ್ಕು ನಾಲ್ಕು ಮಂದಿ ಪೊಲೀಸರು ಹಿಡಿದು ಕೇಸ್ ಹಾಕುತ್ತಾರೆ ಆದರೆ ಟ್ರಾಫಿಕ್ ನಿಯಂತ್ರಣಕ್ಕೆ ಈ ಕಾಳಜಿ ಏಕಿಲ್ಲ ಎಂದು ನಾಮ ನಿರ್ದೇಶಿತ ಸದಸ್ಯ ಶ್ರೀನಿವಾಸ ಶೆಟ್ಟಿ ಕೊಲ್ಯ ಪ್ರಶ್ನಿಸಿದರು.ಟ್ರಾಫಿಕ್ ನಿಯಂತ್ರಕ ಪೊಲೀಸರ ಕಾಳಜಿ ಸಾಕಾಗುತ್ತಿಲ್ಲ ಎಂದು ಹಲವು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಪೊಲೀಸ್ ಇಲಾಖೆ ಸಿಬ್ಬಂದಿ ಪಟ್ಟಣಪಂಚಾಯತಿ ನಿರ್ಣಯ ಕೈಗೊಂಡು ನೋ ಪಾರ್ಕಿಂಗ್ ಫಲಕ ಅಳವಡಿಸಲಿ. ಹಾಗೂ ಪಾರ್ಕಿಂಗ್ ಗೆ ಸೂಕ್ತ ವ್ಯವಸ್ಥೆ ಮಾಡಲಿ. ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಪೊಲೀಸರ ಸಹಕಾರ ಸದಾ ಇದೆ ಎಂದರು.
ಪಟ್ಟಣ ಪಂಚಾಯತಿಯ ಸದಸ್ಯರ ವಾರ್ಡ್ ಗಳಿಗೆ ಹಾಲಿ ಶಾಸಕರು ಮತ್ತು ಮಾಜಿ ಶಾಸಕರು ಕೊಟ್ಟ ಅನುದಾನಗಳ ಕುರಿತು ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು.ವಿಷಯ ಒಂದಕ್ಕೆ ಸಂಬಂಧಿಸಿದಂತೆ ಅನುದಾನದ ವಿಚಾರ ಪ್ರಸ್ತಾಪ ಆಗುತ್ತಿದ್ದಂತೆ ಎದ್ದು ನಿಂತ ಆಡಳಿತ ಪಕ್ಷದ ಸದಸ್ಯ ಅರುಣ್ಪ್ರತಿಪಕ್ಷದ ಆರು ಸದಸ್ಯರಿಗೆ ಶಾಸಕರು ಅನುದಾನ ನೀಡಿದ್ದಾರೆ ಆಡಳಿತ ಪಕ್ಷದ ನಮ್ಮ 12 ಸದಸ್ಯರಿಗೆ ನೀಡಿಲ್ಲ. ಇದು ಆರೋಪವಲ್ಲ. ಸತ್ಯ ಸಂಗತಿ. ಒಂದು ವೇಳೆ ನಮಗೆ ನೀಡಿದ್ದರೆ ಎದೆಮುಟ್ಟಿ ಹೇಳಲಿ ಎಂದರು. ಇದಕ್ಕೆ ಬಿಜೆಪಿಯ ಹರೀಶ್, ಜಯಂತ್ ,ಅಶೋಕ್ ಕುಮಾರ್ ರೈ ಧ್ವನಿಗೂಡಿಸಿದರು.
ಅಗ ಕೆರಳಿದ ಪ್ರತಿಪಕ್ಷ ನಾಯಕ ಆಶ್ರಫ್ ಈ ಹಿಂದಿನ ಶಾಸಕರು ನಮಗೆ ಅನುದಾನ ನೀಡಿರಲಿಲ್ಲ. ಬಿಜೆಪಿಯ ಸದಸ್ಯರಿಗೆ ಮಾತ್ರ ನೀಡಿದ್ದರು. ಇಲ್ಲಾಂತ ಬಿಜೆಪಿಯವರು ಎದೆಮುಟ್ಟಿ ಹೇಳಲಿ ಎಂದು ಮರು ಸವಾಲು ಎಸೆದರು.
ವಾರದ ಸಂತೆಯ ವ್ಯವಸ್ಥೆ, ವಿದ್ಯುತ್ ಪೂರೈಕೆ ಸಮಸ್ಯೆ ನೀರಿನ ಟ್ಯಾಂಕ್ ಸ್ವಚ್ಚತೆ ಇತ್ಯಾದಿಗಳ ಬಗ್ಗೆ ಚರ್ಚೆ ನಡೆಯಿತು. ಹಿಂದಿನ ಸಭೆಗಳ ನಿರ್ಣಯಗಳ ಅನುಷ್ಠಾನದ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.
ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಕರುಣಾಕರ ವಿ., ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಕಾಶ್, ಗ್ರಾಮ ಕರಣಿಕ ಅಜಿತ್, ಅರಣ್ಯಾಧಿಕಾರಿ ವೀರಣ್ಣ, ಮೆಸ್ಕಾಂ ಜೆಇ ನವೀನ್ ಕುಮಾರ್, ಪೊಲೀಸ್ ಇಲಾಖೆಯ ಬಿ. ಎಸ್.ನಾಯಕ್, ರತನ್ ಕುಮಾರ್, ಎಂಜಿನಿಯರ್ ಲೋಕೇಶ್ವಿಟ್ಲ ಪಟ್ಟಣ ಪಂಚಾಯಿತಿ ಹೆಚ್ಚುವರಿ ಎಂಜಿನಿಯರ್ ಮೈಕಲ್ ಡಿಮೆಲ್ಲೊ, ಸಮುದಾಯ ಸಂಘಟನಾಧಿಕಾರಿ ಶ್ರೀಶೈಲ ಸಂಕನ ಗೌಡ, ಸದಸ್ಯರಾದ ಅರುಣ್ ಎಂ. ವಿಟ್ಲ, ವಿಕೆಎಂ ಅಶ್ರಫ್, ಅಶೋಕ್ ಕುಮಾರ್ ರೈ, ಹಸೈನಾರ್ ನೆಲ್ಲಿಗುಡ್ಡೆ, ವಸಂತ, ಜಯಂತ ಸಿ.ಎಚ್, ಹರೀಶ್ ಸಿ.ಎಚ್, ರಕ್ಷಿತಾ ಸನತ್, ಡೀಕಯ್ಯ, ಸುನೀತಾ, ವಿಜಯಲಕ್ಷ್ಮೀ, ಗೋಪಿಕೃಷ್ಣ, ಪದ್ಮಿನಿ, ಶಾಕೀರ, ಲತಾ ಅಶೋಕ್, ನಾಮನಿರ್ದೇಶಕ ಸದಸ್ಯರಾದ ಮಹಮ್ಮದ್ ಇಕ್ಬಾಲ್, ಶ್ರೀನಿವಾಸ ಶೆಟ್ಟಿ ಕೊಲ್ಯ , ವಿವಿಧ ಇಲಾಖೆಗಳ ಅಧಿಕಾರಿಗಳು, ಪಟ್ಟಣ ಪಂಚಾಯತಿ ಸಿಬ್ಬಂದಿ ಉಪಸ್ಥಿತರಿದ್ದರು.




