Breaking
27 Aug 2026, Thu

ಜಾನಪದ ಪರಿಕರಗಳು ದೇಶದ ಬೆಲೆಕಟ್ಟಲಾಗದ ಆಸ್ತಿ: ಟಿ.ಕೆ. ಸ್ವರೂಪ

ಬಂಟ್ವಾಳ: ಒಂದು ಪ್ರದೇಶದ ಸಾಂಸ್ಕೃತಿಕ ಕುರುಹುಗಳಾದ ಕೋಟೆ-ಕೊತ್ತಲಗಳು, ಶಾಸನಗಳು ಹಾಗೂ ವಸ್ತು-ಪರಿಕರಗಳು ದೇಶದ ಬೆಲೆಕಟ್ಟಲಾಗದ ಆಸ್ತಿಯಾಗಿವೆ. ಇವು ನಮ್ಮ ನೆಲದ ಚರಿತ್ರೆಯನ್ನು ತಿಳಿದುಕೊಳ್ಳಲು ಹಾಗೂ ಪೂರ್ವಜರ ಬದುಕು-ಬವಣೆಗಳನ್ನು ಅರಿಯಲು ಸಹಕಾರಿಯಾಗುತ್ತವೆ ಎಂದು ಉಡುಪಿ ಜಿಲ್ಲಾಧಿಕಾರಿ ಟಿ.ಕೆ. ಸ್ವರೂಪ ಹೇಳಿದರು.

ಅವರು ಬಂಟ್ವಾಳ ಬಿ.ಸಿ. ರೋಡ್‌ನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.

ಆಯಾ ದೈವ ದೇವಸ್ಥಾನಗಳ ಸಾಂಸ್ಕೃತಿಕ ಕುರುಹುಗಳು, ಶಾಸನಗಳು ಸೇರಿದಂತೆ ಐತಿಹಾಸಿಕ ಮಹತ್ವದ ವಸ್ತುಗಳನ್ನು ಅವುಗಳ ಮೂಲ ಸ್ಥಳದಲ್ಲಿಯೇ ಜತನದಿಂದ ಕಾಪಾಡುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು. ಈ ನಿಟ್ಟಿನಲ್ಲಿ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ನಿರಂತರತೆ, ಬದ್ಧತೆ ಹಾಗೂ ಕಾರ್ಯಚಟುವಟಿಕೆಗಳು ಶ್ಲಾಘನೀಯ ಎಂದರು.

ನಮ್ಮ ಪರಂಪರೆಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದ್ದು, ಇಂತಹ ಸಂಸ್ಥೆಗಳಿಗೆ ಪ್ರತಿಯೊಬ್ಬರೂ ಬೆಂಬಲ ನೀಡಬೇಕು ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಕೇಂದ್ರದ ಸ್ಥಾಪಕಾಧ್ಯಕ್ಷ ಡಾ. ತುಕಾರಾಮ ಪೂಜಾರಿ ಅವರು ಅಬ್ಬಕ್ಕ ಕಲಾ ಗ್ಯಾಲರಿ ಹಾಗೂ ಮ್ಯೂಸಿಯಂನಲ್ಲಿರುವ ವಸ್ತುಗಳ ಕುರಿತು ಮಾಹಿತಿ ನೀಡಿದರು.

ಕುಂದಾಪುರ ವಿಭಾಗದ ಸಹಾಯಕ ಆಯುಕ್ತರಾದ ಎಸ್.ಆರ್. ರಶ್ಮಿ, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರನಾಥ ಗಟ್ಟಿ ಕಾಪಿಕಾಡ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಹಾಗೂ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಕಾರ್ಯದರ್ಶಿ ಡಾ. ಆಶಾಲತಾ ಸುವರ್ಣ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *