Breaking
27 Aug 2026, Thu

ಬಂಟ್ವಾಳ: ಪೊಳಲಿ ಯಕ್ಷೋತ್ಸವ–2026: ಆಮಂತ್ರಣ ಪತ್ರಿಕೆ ಬಿಡುಗಡೆ

ಬಂಟ್ವಾಳ: ಕರಾವಳಿಯ ಗಂಡುಕಲೆ ಯಕ್ಷಗಾನದ ವೈಭವವನ್ನು ಮತ್ತಷ್ಟು ಎತ್ತರಕ್ಕೇರಿಸುವ “ಪೊಳಲಿ ಯಕ್ಷೋತ್ಸವ–2026”ಕ್ಕೆ ಕ್ಷಣಗಣನೆ ಆರಂಭವಾಗಿದೆ.

ಜಿಲ್ಲೆಯಲ್ಲೇ ದಾಖಲೆಯ ನೂರಕ್ಕೂ ಅಧಿಕ ಯಕ್ಷಗಾನ ಕಲಾವಿದರು ಒಂದೇ ವೇದಿಕೆಯಲ್ಲಿ ಸೇರಲಿರುವ ಅಪೂರ್ವ ಯಕ್ಷೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ಆ.23ರಂದು ಶ್ರೀ ಕ್ಷೇತ್ರ ಪೊಳಲಿಯ ಸನ್ನಿಧಾನದಲ್ಲಿ ಭಕ್ತಿಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ನಡೆಯಿತು.

ಕ್ಷೇತ್ರದ ಪ್ರಧಾನ ಅರ್ಚಕರು ಹಾಗೂ ಅನುವಂಶಿಕ ಆಡಳಿತ ಮುಕ್ತೇಸರರಾದ ಮಾಧವ ಭಟ್ ಪೊಳಲಿ ಪ್ರಾರ್ಥನೆ ನೆರವೇರಿಸಿ, ಪ್ರಸಾದ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಬಳಿಕ ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕ ಚೈತನ್ಯಾನಂದ ಸ್ವಾಮೀಜಿ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕರಾದ ವೆಂಕಟೇಶ ನಾವಡ ಪೊಳಲಿ, ಸುಬ್ರಾಯ ಕಾರಂತ ಪೊಳಲಿ, ಲೋಕೇಶ್ ಭರಣಿ, ಮೋಹನ್ ಬಿಲ್ವಪತ್ರ, ನವೀನ್ ಕಟ್ಟಪುಣಿ, ಸಂಘಟಕ ಬಿ. ಜನಾರ್ಧನ ಅಮ್ಮುಂಜೆ, ಖ್ಯಾತ ಕಲಾವಿದ ಬಿ. ಮೋಹನ್ ಅಮ್ಮುಂಜೆ, ಭಾಗವತರಾದ ಚಿನ್ಮಯಿ ಕಲ್ಲಡ್ಕ, ಶ್ರೇಯಾ ರೋಹಿತ್ ಉಚ್ಚಿಲ, ಮದ್ದಳೆಗಾರ ರೋಹಿತ್ ಉಚ್ಚಿಲ, ಸಮರ್ಥ್ ಉಡುಪ ಕತ್ತಲ್‌ಸಾರ್ ಹಾಗೂ ರಾಮಕೃಷ್ಣ ತಪೋವನ ಯಕ್ಷಗಾನ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಯಕ್ಷ ಕಲಾ ಪೊಳಲಿ ಆಶ್ರಯದಲ್ಲಿ 31ನೇ ವರ್ಷದ ವರ್ಧಂತ್ಯೋತ್ಸವದ ಅಂಗವಾಗಿ ನಡೆಯುವ ಪೊಳಲಿ ಯಕ್ಷೋತ್ಸವ–2026, ಅ.11ರಂದು ಆದಿತ್ಯವಾರ ಬೆಳಿಗ್ಗೆ 8.30ರಿಂದ ರಾತ್ರಿ 10.30ರವರೆಗೆ ಶ್ರೀ ಕ್ಷೇತ್ರ ಪೊಳಲಿಯ ರಾಜಾಂಗಣದಲ್ಲಿ ಜರುಗಲಿದೆ.

ಯಕ್ಷಗಾನ ಕಲೆಯ ವೈಭವ, ಕಲಾವಿದರ ಕಲಾ ಚಾತುರ್ಯ ಹಾಗೂ ಕರಾವಳಿಯ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಒಂದೇ ವೇದಿಕೆಯಲ್ಲಿ ಅನಾವರಣಗೊಳಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಈ ಯಕ್ಷೋತ್ಸವವು ಈ ಬಾರಿ ವಿಶೇಷ ಆಕರ್ಷಣೆಯಾಗಲಿದೆ.

ನೂರಕ್ಕೂ ಅಧಿಕ ಕಲಾವಿದರ ಸಮ್ಮಿಲನ ಯಕ್ಷಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದ್ದು, ಯಕ್ಷಗಾನ ಲೋಕದಲ್ಲಿ ಮತ್ತೊಂದು ದಾಖಲೆ ಬರೆಯುವ ನಿರೀಕ್ಷೆ ಮೂಡಿಸಿದೆ.

Leave a Reply

Your email address will not be published. Required fields are marked *