ಬಂಟ್ವಾಳ: ಕರಿಯಂಗಳ ಗ್ರಾಮದ ತಂತ್ರಿಬೆಟ್ಟು ಎಂಬಲ್ಲಿ ಆ.17ರಂದು ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬಳಿ ಯುವಕನೊಬ್ಬನ ಶವ ಪತ್ತೆಯಾಗಿದ್ದು, ವಿದ್ಯುತ್ ಶಾಕ್‌ನಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ಮೃತರನ್ನು ತಂತ್ರಿಬೆಟ್ಟು ನಿವಾಸಿ, ವೃತ್ತಿಯಲ್ಲಿ ಎಲೆಕ್ಟ್ರೀಷಿಯನ್ ಆಗಿದ್ದ ಹರೀಶ್ ಟಿ. (38) ಎಂದು ಗುರುತಿಸಲಾಗಿದೆ. ಅವರು ಅವಿವಾಹಿತರಾಗಿದ್ದರು.
ಹರೀಶ್ ಅವರು ಆ.16ರಂದು ಎಂದಿನಂತೆ ಕೆಲಸಕ್ಕೆ ತೆರಳಿ ರಾತ್ರಿ ಸುಮಾರು 8 ಗಂಟೆಗೆ ಮನೆಗೆ ವಾಪಸ್ ಬಂದಿದ್ದರು. ಊಟ ಮಾಡಿ ಮಲಗಿದ್ದ ಅವರು ಆ.17ರಂದು ಬೆಳಗ್ಗೆ ಮನೆಯವರು ಎದ್ದು ನೋಡಿದಾಗ ಮನೆಯಲ್ಲಿ ಇರಲಿಲ್ಲ.

ಈ ನಡುವೆ ಬೆಳಗ್ಗೆ ಸುಮಾರು 7.30ಕ್ಕೆ ಪುರುಷೋತ್ತಮ ಎಂಬವರು ಕುಟುಂಬದವರಿಗೆ ಕರೆ ಮಾಡಿ, ತಂತ್ರಿಬೆಟ್ಟಿನ ಟ್ರಾನ್ಸ್‌ಫಾರ್ಮರ್ ಬಳಿ ಭಾರಿ ಸದ್ದು ಕೇಳಿಸಿದ್ದು, ವಿದ್ಯುತ್ ಸಮಸ್ಯೆ ಉಂಟಾಗಿದೆ ಎಂದು ತಿಳಿಸಿದರು. ಸ್ಥಳಕ್ಕೆ ತೆರಳಿ ನೋಡಿದಾಗ ಹರೀಶ್ ಅವರ ಮೋಟಾರ್ ಸೈಕಲ್ ಹಾಗೂ ಅವರು ಟ್ರಾನ್ಸ್‌ಫಾರ್ಮರ್ ಬಳಿ ಬಿದ್ದಿರುವುದು ಕಂಡುಬಂದಿದೆ ಎಂದು ಮಾಹಿತಿ ನೀಡಿದರು.

ಕೂಡಲೇ ಸ್ಥಳಕ್ಕೆ ತೆರಳಿದ ಮನೆಯವರು ಹರೀಶ್ ಅವರು ಟ್ರಾನ್ಸ್‌ಫಾರ್ಮರ್‌ನ ಕೆಳಭಾಗದಲ್ಲಿ ಬಿದ್ದಿರುವುದನ್ನು ಕಂಡು ಪರಿಶೀಲಿಸಿದಾಗ ಮೃತಪಟ್ಟಿರುವುದು ತಿಳಿದುಬಂದಿದೆ.

ಬೆಳಗ್ಗೆ 6.30ರಿಂದ 7.30ರ ನಡುವಿನ ಅವಧಿಯಲ್ಲಿ ಹರೀಶ್ ಅವರು ಟ್ರಾನ್ಸ್‌ಫಾರ್ಮರ್ ಬಳಿ ತೆರಳಿದ್ದು, ಈ ಸಂದರ್ಭ ವಿದ್ಯುತ್ ಪ್ರವಹಿಸಿ ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ. ಆದರೆ ಅವರು ಯಾವ ಕಾರಣಕ್ಕಾಗಿ ಟ್ರಾನ್ಸ್‌ಫಾರ್ಮರ್ ಬಳಿ ತೆರಳಿದ್ದರು ಎಂಬುದು ಸದ್ಯ ನಿಗೂಢವಾಗಿದೆ.

ವಿದ್ಯುತ್ ಶಾಕ್‌ನಿಂದಲೇ ಸಾವು ಸಂಭವಿಸಿದೆಯೇ ಎಂಬುದು ಪ್ರಯೋಗಾಲಯದ ವರದಿ ಬಳಿಕ ಖಚಿತವಾಗಬೇಕಿದೆ. ಮೃತರ ಸಹೋದರ ದಿನೇಶ್ ನೀಡಿದ ದೂರಿನ ಆಧಾರದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.


