Breaking
11 Oct 2026, Sun

ಅಲೋಶಿಯಸ್ ಗೊನ್ಜಾಗಾ ಶಾಲೆಯಲ್ಲಿ ತೃತೀಯ ಭಾಷೆಯಾಗಿ ಕೊಂಕಣಿ: ಕನ್ನಡ ಲಿಪಿಯಲ್ಲೂ ಕಲಿಕೆಗೆ ಅವಕಾಶ

ಮಂಗಳೂರು: ಅಲೋಶಿಯಸ್ ಗೊನ್ಜಾಗಾ ಸಿಬಿಎಸ್‌ಇ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದ ಆರಂಭದಿಂದ ತೃತೀಯ ಭಾಷೆಯಾಗಿ ಕೊಂಕಣಿ ಭಾಷೆಯನ್ನು ಪರಿಚಯಿಸಲಾಗುವುದು ಎಂದು ಶಾಲೆಯ ಪ್ರಾಂಶುಪಾಲ ಫಾ. ರೋಹನ್ ಡಿ’ಅಲ್ಮೇಡಾ ಎಸ್.ಜೆ. ಘೋಷಿಸಿದರು.

ಕೊಂಕಣಿ ಭಾಷಾ ಮಂಡಳ್ ಕರ್ನಾಟಕದ ಸಹಯೋಗದೊಂದಿಗೆ ಶಾಲೆಯಲ್ಲಿ ಕೊಂಕಣಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಂಕಣಿ ಮಾತೃಭಾಷೆಯಾಗಿರುವ ಮಕ್ಕಳು ಕನ್ನಡ, ದೇವನಾಗರಿ, ರೋಮಿ ಸೇರಿದಂತೆ ತಮಗೆ ಅನುಕೂಲವಾದ ಲಿಪಿಗಳ ಮೂಲಕ ಕೊಂಕಣಿ ಕಲಿಯಲು ಪ್ರೋತ್ಸಾಹ ನೀಡಲಾಗುವುದು ಎಂದರು.

ಕೊಂಕಣಿ ಭಾಷಾ ಮಂಡಳ್ ಕರ್ನಾಟಕದ ಅಧ್ಯಕ್ಷ ರೇಮಂಡ್ ಡಿಕೂನಾ ತಾಕೊಡೆ ಮಾತನಾಡಿ, 1992ರ ಆಗಸ್ಟ್ 20ರಿಂದ ಕೊಂಕಣಿ ಭಾಷೆ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಸ್ಥಾನ ಪಡೆದು ಸಾಂವಿಧಾನಿಕ ಮಾನ್ಯತೆ ಪಡೆದಿದೆ.

ಇದು ಹಿರಿಯರು ಮಾಡಿದ ಮಹತ್ವದ ಸಾಧನೆಯಾಗಿದ್ದು, ಕರ್ನಾಟಕದ ಕೆಬಿಎಂಕೆ ಹಾಗೂ ಸೈಂಟ್ ಅಲೋಶಿಯಸ್ ಸಂಸ್ಥೆಯೂ ಇದಕ್ಕಾಗಿ ಶ್ರಮಿಸಿದೆ ಎಂದರು. ಬಳಿಕ ವಿದ್ಯಾರ್ಥಿಗಳಿಗೆ ಕೊಂಕಣಿ ಭಾಷೆಯಲ್ಲಿ ರಸಪ್ರಶ್ನೆ ನಡೆಸಿ ಬಹುಮಾನ ವಿತರಿಸಿದರು.

ಮುಖ್ಯ ಅತಿಥಿ ಎಸ್.ಎಲ್. ಪ್ರಶಾಂತ ಶೇಟ್ ಮಾತನಾಡಿ, ಕೊಂಕಣಿ ಭಾಷೆ 44 ಪ್ರಭೇದಗಳನ್ನು ಹೊಂದಿದ್ದು, ಕ್ರೈಸ್ತ, ಹಿಂದೂ, ಮುಸ್ಲಿಂ, ದೈವಜ್ಞ, ಜಿಎಸ್‌ಬಿ, ಖಾರ್ವಿ, ಕುಡುಮಿ ಸೇರಿದಂತೆ ವಿವಿಧ ಸಮುದಾಯಗಳು ಕೊಂಕಣಿ ಮಾತನಾಡುವ ಮೂಲಕ ಭಾಷೆಯನ್ನು ಉಳಿಸಿಕೊಂಡಿದ್ದಾರೆ. ಇದೇ ಕೊಂಕಣಿ ಅಸ್ಮಿತೆಯ ಪ್ರತೀಕವಾಗಿದ್ದು, ‘ವಿವಿಧತೆಯಲ್ಲಿ ಏಕತೆ’ಯನ್ನು ಸಾರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಬಹುಭಾಷಾ ಚಲನಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ಹೆರ್ರಿ ಫರ್ನಾಂಡೀಸ್ ಬಾರ್ಕೂರು, ಕೆಬಿಎಂಕೆ ಖಜಾಂಚಿ ವಸಂತ ರಾವ್, ಉಪಪ್ರಾಂಶುಪಾಲರಾದ ಅಪರ್ಣಾ ಸುರೇಶ್ ಹಾಗೂ ಲೊರೆಲ್ ಡಿಸೋಜ ಉಪಸ್ಥಿತರಿದ್ದರು.

ಮಿಶಲ್ ಕ್ರಾಸ್ಟಾ ಸ್ವಾಗತಿಸಿ ಪರಿಚಯಿಸಿದರು. ಜಿವಿತ್ ಪ್ರೆನಿಟಾ ಫೆರಾವೊ ಕಾರ್ಯಕ್ರಮ ನಿರೂಪಿಸಿದರು. ಲೊರೆಲ್ ಡಿಸೋಜ ವಂದಿಸಿದರು.

ಕೆಬಿಎಂಕೆ ಸದಸ್ಯರಾದ ಡಿಸೋಜ, ಶಾಂತಿ ವೆರೋನಿಕಾ, ಸ್ಟೇನಿ ತಾವ್ರೊ, ಡೆನಿಸ್ ಡಿಸೋಜ ವಾಮಂಜೂರು, ಹೆರಾಲ್ಡ್ ಅಲ್ಬುಕರ್ಕ್, ಮರಿಯಾ ಪಿಂಟೊ, ಪ್ರೇಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *