Breaking
14 Aug 2026, Fri

ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿಯ ಯೋಜನೆಗಳು ಸಮಾಜಕ್ಕೆ ಮಾದರಿ: ರಘುನಾಥ ಸೋಮಯಾಜಿ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿಯ ಯೋಜನೆಗಳು ಸಮಾಜಕ್ಕೆ ಮಾದರಿಯಾಗಿವೆ.

ಸರ್ಕಾರಗಳು ಮಾಡದಂತಹ ಹಲವು ಕಾರ್ಯಗಳನ್ನು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಕಾರ್ಯರೂಪಕ್ಕೆ ತಂದು, ಬಡವರ ಪಾಲಿನ ಆಶಾಕಿರಣವಾಗಿದ್ದಾರೆ ಎಂದು ನರಿಕೊಂಬು ಶ್ರೀ ಭಯಕೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ರಘುನಾಥ ಸೋಮಯಾಜಿ ಹೇಳಿದರು.


ಆ.13ರಂದು ನರಿಕೊಂಬು ಶ್ರೀ ಭಯಕೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಬಂಟ್ವಾಳ ತಾಲೂಕು ಶೌರ್ಯ ವಿಪತ್ತು ನಿರ್ವಹಣಾ ಸಮಿತಿಯ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.


ಶೌರ್ಯ ಧರ್ಮಸ್ಥಳ ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯರು ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸುತ್ತಿದ್ದು, ಯಾವುದೇ ಸಂದರ್ಭದಲ್ಲೂ ತಮ್ಮನ್ನು ತಾವು ತೊಡಗಿಸಿಕೊಂಡು ಸೇವೆಗೆ ಸಿದ್ಧರಾಗಿರುವುದು ಶ್ಲಾಘನೀಯ. ಅವರು ಸಲ್ಲಿಸುವ ಸೇವೆ ದೇಶಸೇವೆಗೆ ಸಮಾನವಾಗಿದೆ ಎಂದು ಎನ್ಡಿಆರ್ಎಫ್ ಕಮಾಂಡರ್ ಶಾಂತಿಲಾಲ್ ಜಟಿಯಾ ಹೇಳಿದರು.


ಜನಜಾಗೃತಿ ವಿಭಾಗದ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿ. ಪಾಯಸ್ ಮಾತನಾಡಿ, ರಾಜ್ಯದಲ್ಲಿ ಸಂಭವಿಸುವ ವಿವಿಧ ವಿಪತ್ತುಗಳ ಸಂದರ್ಭಗಳಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಶೌರ್ಯ ತಂಡ ನಿರಂತರವಾಗಿ ಸೇವೆ ಸಲ್ಲಿಸುತ್ತಿದೆ. ಆಪತ್ತಿನ ಸಂದರ್ಭದಲ್ಲಿ ಆತ್ಮಸ್ಥೈರ್ಯದಿಂದ ಸ್ಪಂದಿಸಿ, ಸಂಕಷ್ಟದಲ್ಲಿರುವವರ ಜೀವ–ಜೀವನಕ್ಕೆ ನೆರವಾಗುವ ಸ್ವಯಂಸೇವಕರ ಸಂಘಟಿತ ಸೇವೆಯೇ ಶೌರ್ಯ ವಿಪತ್ತು ನಿರ್ವಹಣಾ ಸಮಿತಿ. ಶ್ರೀ ಕ್ಷೇತ್ರ ಧರ್ಮಸ್ಥಳವು ಕಲಿಯುಗದ ಕಾಮಧೇನು ಹಾಗೂ ಕಲ್ಪವೃಕ್ಷದಂತೆ ಸಮಾಜಕ್ಕೆ ಸೇವೆ ನೀಡುತ್ತಿದೆ ಎಂದರು.


ಕಾರ್ಯಕ್ರಮದಲ್ಲಿ ಜಿಲ್ಲಾ ನಿರ್ದೇಶಕ ದಿನೇಶ್ ಡಿ., ಶೌರ್ಯ ಯೋಜನಾಧಿಕಾರಿ ಜೈವಂತ್ ಪಟಗಾರ, ತಾಲೂಕು ಶೌರ್ಯ ಸಮಿತಿಯ ಮಾಸ್ಟರ್ ಕೃಷ್ಣಪ್ಪ ಕುಲಾಲ್, ಕ್ಯಾಪ್ಟನ್ ಪ್ರಕಾಶ್ ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷ ಸದಾನಂದ ಉಪಸ್ಥಿತರಿದ್ದರು.


ಉದ್ಘಾಟನಾ ಸಮಾರಂಭದ ಬಳಿಕ ನೇತ್ರಾವತಿ ನದಿಯ ತಟದಲ್ಲಿ ಬಂಟ್ವಾಳ ತಾಲೂಕಿನ 90 ಶೌರ್ಯ ಸ್ವಯಂಸೇವಕರಿಗೆ ವಿಪತ್ತಿನ ಸಂದರ್ಭದಲ್ಲಿ ಪ್ರಥಮ ಸ್ಪಂದನೆ, ಈಜುವಿಕೆ, ಪ್ರವಾಹ ಪರಿಸ್ಥಿತಿ ನಿರ್ವಹಣೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಯಿತು.


ಈ ಸಂದರ್ಭದಲ್ಲಿ ನೂತನ ತಾಲೂಕು ಶೌರ್ಯ ಸಮಿತಿಯ ಮಾಸ್ಟರ್ ಹಾಗೂ ಕ್ಯಾಪ್ಟನ್ ಆಯ್ಕೆ ನಡೆಯಿತು. ಬಂಟ್ವಾಳ ಶೌರ್ಯ ಸಮಿತಿಯ ಮಾಸ್ಟರ್ ಆಗಿ ಪ್ರವೀಣ್ ಕಾಡಬೆಟ್ಟು ಹಾಗೂ ಕ್ಯಾಪ್ಟನ್ ಆಗಿ ಜಗದೀಶ್ ಆಚಾರ್ಯ ಆಯ್ಕೆಯಾದರು.


ಗ್ರಾಮಾಭಿವೃದ್ಧಿ ಯೋಜನೆಯ ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯಾನಂದ ಪಿ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜನಜಾಗೃತಿ ಮೇಲ್ವಿಚಾರಕ ನಿತೇಶ್ ಕೆ. ಕಾರ್ಯಕ್ರಮ ನಿರ್ವಹಿಸಿದರು.

Leave a Reply

Your email address will not be published. Required fields are marked *