Breaking
18 Jul 2026, Sat

ಮಂಗಳೂರು: ಅಂತರ್‌ ರಾಜ್ಯ ಮನೆಗಳ್ಳರ ಬಂಧನ – ₹10 ಲಕ್ಷ ಮೌಲ್ಯದ ಚಿನ್ನ-ಬೆಳ್ಳಿ ವಶ

ಮಂಗಳೂರು ನಗರದ ಉರ್ವ ಮಾರ್ಕೆಟ್ ಸಮೀಪದ ಮಠದಕಣಿ ಪ್ರದೇಶದಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಬರ್ಕೆ ಪೊಲೀಸರು ಐದು ದಿನಗಳಲ್ಲೇ ಭೇದಿಸಿ, ನೇಪಾಳ ಮೂಲದ ಮೂವರು ಕುಖ್ಯಾತ ಅಂತರ್ರಾಜ್ಯ ಮನೆಗಳ್ಳರನ್ನು ಬಂಧಿಸಿದ್ದಾರೆ.

ಬಂಧಿತರನ್ನು ತಿಲಕ್ ಕುಮಾರ್ ಖಡ್ಕ (36), ಅಶೋಕ್ ರಾಜ್ ಅಲಿಯಾಸ್ ಅಶೋಕ್ ಸಿಂಗ್ ಠಾಕುರಿ (33) ಹಾಗೂ ದಿಪೆಂದರ್ ರಸೈಲಿ (25) ಎಂದು ಗುರುತಿಸಲಾಗಿದೆ.


ಜುಲೈ 11ರಂದು ಮನೆಗೆ ಬೀಗ ಹಾಕಿ ಸಂಬಂಧಿಕರ ಮನೆಗೆ ತೆರಳಿದ್ದ ಕುಟುಂಬ, ಜುಲೈ 12ರಂದು ಹಿಂದಿರುಗಿದಾಗ ಮನೆಯ ಹಿಂಭಾಗದ ಬಾಗಿಲು ಒಡೆದು ಸುಮಾರು 64 ಗ್ರಾಂ ಚಿನ್ನಾಭರಣ ಹಾಗೂ ₹25 ಸಾವಿರ ನಗದು ಸೇರಿದಂತೆ ₹8.57 ಲಕ್ಷ ಮೌಲ್ಯದ ವಸ್ತುಗಳು ಕಳವಾಗಿರುವುದು ಬೆಳಕಿಗೆ ಬಂದಿತ್ತು.


ಬರ್ಕೆ ಪೊಲೀಸರು ಜುಲೈ 17ರಂದು ಬೋಳೂರಿನಲ್ಲಿ ಮೂವರನ್ನೂ ಬಂಧಿಸಿ, ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಚಿನ್ನಾಭರಣಗಳ ಜೊತೆಗೆ ಮಹಾರಾಷ್ಟ್ರದ ನಾಸಿಕ್ನಲ್ಲಿ ಕಳವಾಗಿದ್ದ 790 ಗ್ರಾಂ ಬೆಳ್ಳಿ ಆಭರಣಗಳನ್ನೂ ಸೇರಿಸಿ ಒಟ್ಟು ಸುಮಾರು ₹10 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.


ವಿಚಾರಣೆ ವೇಳೆ ಆರೋಪಿಗಳು ಉರ್ವಾ ಠಾಣೆ ವ್ಯಾಪ್ತಿಯ ಮನೆ ಕಳ್ಳತನ ಯತ್ನ ಸೇರಿದಂತೆ ಬೆಂಗಳೂರು, ದಾವಣಗೆರೆ, ಉಡುಪಿ ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 15ಕ್ಕೂ ಹೆಚ್ಚು ಮನೆ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ.

ತಮಿಳುನಾಡು, ದೆಹಲಿ ಹಾಗೂ ಹರ್ಯಾಣ ರಾಜ್ಯಗಳಲ್ಲಿಯೂ ಇವರ ವಿರುದ್ಧ ಪ್ರಕರಣಗಳಿರುವ ಮಾಹಿತಿ ಲಭ್ಯವಾಗಿದ್ದು, ಪೊಲೀಸರು ಮುಂದಿನ ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *