Breaking
18 Jul 2026, Sat

ಹೆಜಮಾಡಿ ಸಮುದ್ರದಲ್ಲಿ ಮೀನುಗಾರಿಕಾ ದೋಣಿ ಮಗುಚಿ ಬಿದ್ದ ಘಟನೆ: ಏಳು ಮೀನುಗಾರರು ಪ್ರಾಣಾಪಾಯದಿಂದ ಪಾರು

ಪಡುಬಿದ್ರಿ: ಮಲ್ಪೆಯಿಂದ ಮೀನುಗಾರಿಕೆಗೆ ತೆರಳಿದ್ದ ‘ಶ್ರೀ ದುರ್ಗಾ ಕೃಪಾ’ ಹೆಸರಿನ ನಾಡದೋಣಿಯೊಂದು ಶುಕ್ರವಾರ ಬೆಳಿಗ್ಗೆ ಸುಮಾರು 10 ಗಂಟೆ ವೇಳೆಗೆ ಹೆಜಮಾಡಿ ಸಿಎಸ್ಪಿ ಠಾಣಾ ವ್ಯಾಪ್ತಿಯ ಇಡ್ಯಾ ಗ್ರಾಮದ ದೊಡ್ಡಕೊಪ್ಲ ಸಮುದ್ರ ತೀರದ ಬಳಿ ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿಬಿದ್ದಿದೆ.

ದೋಣಿಯಲ್ಲಿದ್ದ ಆಂಧ್ರ ಪ್ರದೇಶ ಮೂಲದ ಏಳು ಮಂದಿ ಮೀನುಗಾರರಾದ ನಾಗರಾಜ್ (32), ಬಾಲರಾಜ್ (32), ಅಣ್ಣಾವರಂ (30), ಸಿ.ಎಚ್. ತಾಜು (26), ಸಿ.ಎಚ್. ಜ್ಯೋತಿ (24), ತಾತಾಜಿ (45) ಹಾಗೂ ಪೆಂತಯ್ಯ (55) ಅವರು ಸಮುದ್ರದಲ್ಲಿ ಈಜಿ ಸುರಕ್ಷಿತವಾಗಿ ದಡ ಸೇರಿದ್ದು, ಸಂಭವಿಸಬಹುದಾಗಿದ್ದ ಭಾರೀ ಅನಾಹುತದಿಂದ ಪಾರಾಗಿದ್ದಾರೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಹೆಜಮಾಡಿ ಸಿಎಸ್ಪಿ ಠಾಣೆಯ ಎಎಸ್ಐ ಪ್ರತಿಭಾ, ಸಿಎಚ್ಸಿ ಸಚಿನ್, ಕೆಎನ್ಡಿ ಸಿಬ್ಬಂದಿ ಶರತ್, ನಿಖಿಲ್ ಹಾಗೂ ಚಿರಂಜೀವಿ ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿ ಮೀನುಗಾರರ ಸುರಕ್ಷತೆಯನ್ನು ಖಚಿತಪಡಿಸಿದರು.

ಬಳಿಕ ಮಗುಚಿಬಿದ್ದ ದೋಣಿಯನ್ನು ಮತ್ತೊಂದು ದೋಣಿಯ ನೆರವಿನಿಂದ ಕುಳಾಯಿ ಜೆಟ್ಟಿಗೆ ತಂದು ಮೇಲಕ್ಕೆ ಎಳೆಯಲಾಯಿತು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Leave a Reply

Your email address will not be published. Required fields are marked *