Breaking
18 Jul 2026, Sat

ಶಿರಾಡಿಗುಡ್ಡೆ ಬಳಿ ಚಲಿಸುತ್ತಿದ್ದ ಕಾರಿಗೆ ಬೆಂಕಿ; ಇಬ್ಬರು ಪ್ರಾಣಾಪಾಯದಿಂದ ಪಾರು

ಪುತ್ತೂರು: ರಾಷ್ಟ್ರೀಯ ಹೆದ್ದಾರಿ 75ರ ಗೋಳಿತೊಟ್ಟು ಸಮೀಪದ ಶಿರಾಡಿಗುಡ್ಡೆ ಬಳಿ ಶುಕ್ರವಾರ ಸಂಜೆ ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಕಾರಿನಲ್ಲಿದ್ದ ಚಾಲಕ ಹಾಗೂ ಮತ್ತೋರ್ವ ಪ್ರಯಾಣಿಕ ಸಮಯಪ್ರಜ್ಞೆಯಿಂದ ವಾಹನದಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.


ಬೆಂಗಳೂರಿನಿಂದ ಮಂಗಳೂರಿನತ್ತ ಸಂಚರಿಸುತ್ತಿದ್ದ ಕಾರು ಶಿರಾಡಿಗುಡ್ಡೆ ತಲುಪುತ್ತಿದ್ದಂತೆ ಎಂಜಿನ್ ಭಾಗದಿಂದ ಹೊಗೆ ಹಾಗೂ ಬೆಂಕಿ ಕಾಣಿಸಿಕೊಂಡಿದೆ. ಅಪಾಯವನ್ನು ಅರಿತ ಚಾಲಕ ಕೂಡಲೇ ಕಾರನ್ನು ರಸ್ತೆ ಬದಿಗೆ ನಿಲ್ಲಿಸಿ, ಜೊತೆಯಲ್ಲಿದ್ದ ಪ್ರಯಾಣಿಕನೊಂದಿಗೆ ಸುರಕ್ಷಿತವಾಗಿ ವಾಹನದಿಂದ ಹೊರಬಂದಿದ್ದಾರೆ.


ಬಳಿಕ ಎನ್ಎಚ್-75 ನಾಲ್ಕು ಪಥ ಕಾಮಗಾರಿ ನಡೆಸುತ್ತಿರುವ ಕೆಎನ್ಆರ್ ಸಂಸ್ಥೆಯ ಟ್ಯಾಂಕರ್ನಲ್ಲಿದ್ದ ನೀರನ್ನು ಬಳಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಘಟನೆಯಲ್ಲಿ ಕಾರಿನ ಎಂಜಿನ್ ಭಾಗ ಸಂಪೂರ್ಣ ಸುಟ್ಟು ಕರಕಲಾಗಿದ್ದು, ವಾಹನದ ಉಳಿದ ಭಾಗಕ್ಕೂ ಭಾಗಶಃ ಹಾನಿಯಾಗಿದೆ.


ಘಟನೆಯಿಂದ ಕೆಲಕಾಲ ಹೆದ್ದಾರಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದರೂ, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಪ್ರಾಥಮಿಕ ಮಾಹಿತಿಯಂತೆ ಎಂಜಿನ್ನ ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

Leave a Reply

Your email address will not be published. Required fields are marked *