Breaking
25 Jun 2026, Thu

48 ಅಡಿ ಆಳದ ಬಾವಿಗೆ ಬಿದ್ದ ದನ ರಕ್ಷಣೆ: ಪಶು ಸಂಜೀವಿನಿ ತಂಡದ ಸಮಯೋಚಿತ ಕಾರ್ಯಾಚರಣೆ

ಬಂಟ್ವಾಳ: ತಾಲೂಕಿನ ವಿಟ್ಲ ಹೋಬಳಿಯ ಕೇಪು ಗ್ರಾಮದ ಕುದ್ದುಪದವು ನಿವಾಸಿ ಶ್ರೀ ಸದಾನಂದ ಶೆಟ್ಟಿಯವರ ಸಾಕು ದನವು ಸುಮಾರು 48 ಅಡಿ ಆಳದ ನೀರಿರುವ ತೆರೆದ ಅಪಾಯಕಾರಿ ಬಾವಿಗೆ ಬಿದ್ದು ಜೀವನ್ಮರಣದ ಸ್ಥಿತಿಯಲ್ಲಿತ್ತು.

ಈ ಕುರಿತು ಸ್ಥಳೀಯ ಹಾಲು ಉತ್ಪಾದಕ ಸಂಘದ ಅಧ್ಯಕ್ಷರು ಹಾಗೂ ಕೃತಕ ಗರ್ಭಧಾರಣಾ ಸಹಾಯಕ ಶ್ರೀ ಲಕ್ಷ್ಮಣ ಅವರು ನೀಡಿದ ತುರ್ತು ಮಾಹಿತಿಗೆ ಸ್ಪಂದಿಸಿದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯವಾಣಿ 1962ರ ಪಶು ಸಂಜೀವಿನಿ ವಾಹನದ ತಂಡ ತಕ್ಷಣವೇ ಸ್ಥಳಕ್ಕೆ ಧಾವಿಸಿತು.

ಪಶುವೈದ್ಯರಾದ ಡಾ. ಸುನಿಲ್ ಹಾಗೂ ವಾಹನ ಚಾಲಕ ಶ್ರೀ ಜಯಗಣೇಶ್ ಅವರು ಕ್ಷಿಪ್ರವಾಗಿ ಸ್ಥಳಕ್ಕಾಗಮಿಸಿ, ಸ್ಥಳೀಯರ ಸಹಕಾರದೊಂದಿಗೆ ದನದ ರಕ್ಷಣಾ ಕಾರ್ಯಾಚರಣೆ ನಡೆಸಿದರು. ದನಕ್ಕೆ ತುರ್ತು ಚಿಕಿತ್ಸೆ ನೀಡಿ ಪ್ರಾಣಾಪಾಯದಿಂದ ಪಾರು ಮಾಡಲಾಯಿತು.

ಈ ರೋಚಕ ರಕ್ಷಣಾ ಕಾರ್ಯಾಚರಣೆಯಲ್ಲಿ ಶ್ರೀ ಮುರಳಿ ವಿಟ್ಲ ಮತ್ತು ಅವರ ತಂಡ ಬಾವಿಯೊಳಗೆ ಇಳಿದು ದನವನ್ನು ಸುರಕ್ಷಿತವಾಗಿ ಕಟ್ಟಿಹಾಕುವ ಕಾರ್ಯದಲ್ಲಿ ಸಹಕರಿಸಿದರೆ, ಬಳಿಕ ಕ್ರೇನ್ ಸಹಾಯದಿಂದ ದನವನ್ನು ಮೇಲಕ್ಕೆತ್ತಲಾಯಿತು.

ಸಮಯೋಚಿತವಾಗಿ ಸ್ಪಂದಿಸಿ ಕರ್ತವ್ಯನಿಷ್ಠೆಯಿಂದ ತುರ್ತು ವೈದ್ಯಕೀಯ ಸೇವೆ ನೀಡಿ ಜೀವ ರಕ್ಷಣೆ ಮಾಡಿದ ಪಶು ಸಂಜೀವಿನಿ ತಂಡದ ವೈದ್ಯಕೀಯ ಸಿಬ್ಬಂದಿಗೆ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *