Breaking
25 Sep 2026, Fri

ಕಲ್ಲಡ್ಕ ಶ್ರೀರಾಮ ಕಾಲೇಜಿನ ಪಿಯುಸಿ ರ‍್ಯಾಂಕ್ ವಿದ್ಯಾರ್ಥಿಗೆ ಗೌರವ ಅಭಿನಂದನೆ

ಬಂಟ್ವಾಳ: 2025-26ನೇ ಸಾಲಿನ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ 600ಕ್ಕೆ 594 ಅಂಕಗಳನ್ನು ಗಳಿಸಿ ರಾಜ್ಯ ಮಟ್ಟದಲ್ಲಿ 7ನೇ ರ‍್ಯಾಂಕ್ ಹಾಗೂ ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಪ್ರಿತೇಶ್ ಅವರನ್ನು ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು.

ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಉಮೇಶ್ ಪೂಜಾರಿ ಹಾಗೂ ಪುಷ್ಪಾವತಿ ದಂಪತಿಗಳ ಪುತ್ರನಾದ ಪ್ರಿತೇಶ್ ಅವರನ್ನು ಬೆಳ್ಳಿಪಾಡಿ ಕೃಷ್ಣ ರೈ ರೈತ ಸಭಾಂಗಣದಲ್ಲಿ ಸನ್ಮಾನಿಸಲಾಯಿತು.

ಅಭಿನಂದಿಸಿ ಮಾತನಾಡಿದ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, “ಸಹಕಾರ ಸಂಘದ ವ್ಯಾಪ್ತಿಯ ವಿದ್ಯಾರ್ಥಿ ಪ್ರಿತೇಶ್ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣವನ್ನು ಸರ್ಕಾರಿ ಶಾಲೆಯಲ್ಲಿ ಪೂರ್ಣಗೊಳಿಸಿ, ಇದೀಗ ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ಅಭ್ಯಾಸ ಮಾಡಿ ರಾಜ್ಯ ಮಟ್ಟದಲ್ಲಿ 7ನೇ ಸ್ಥಾನ ಪಡೆದಿರುವುದು ಸಂಘಕ್ಕೆ ಹೆಮ್ಮೆಯ ಸಂಗತಿ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆದರೂ ಉನ್ನತ ಸಾಧನೆ ಸಾಧ್ಯ ಎಂಬುದಕ್ಕೆ ಪ್ರಿತೇಶ್ ಮಾದರಿಯಾಗಿದ್ದಾರೆ” ಎಂದು ಹೇಳಿದರು.

ಸಂಘದ ಉಪಾಧ್ಯಕ್ಷ ಸಂದೇಶ ಶೆಟ್ಟಿ ಹಾಗೂ ನಿರ್ದೇಶಕರಾದ ಸತೀಶ್ ಪೂಜಾರಿ ಮತ್ತು ರಶ್ಮಿತ್ ಶೆಟ್ಟಿ ಮುಂದಿನ ಶೈಕ್ಷಣಿಕ ವರ್ಷಗಳಲ್ಲಿಯೂ ಇದೇ ರೀತಿಯ ಸಾಧನೆ ಮುಂದುವರೆಯಲಿ ಎಂದು ಶುಭ ಹಾರೈಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರಿತೇಶ್, ಸಂಘದ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ನಿರ್ದೇಶಕರಾದ ದಿನೇಶ್ ಪೂಜಾರಿ, ಚಂದ್ರಶೇಖರ ಶೆಟ್ಟಿ, ವಿಶ್ವನಾಥ್ ಶೆಟ್ಟಿಗಾರ್, ಜಾರಪ್ಪ ನಾಯ್ಕ, ವೀರಪ್ಪ ಪರವ, ಎ ಶಿವ ಗೌಡ, ಪುಷ್ಪಲತಾ ಎಸ್ ಆರ್, ರಾಜೇಶ್ ಶೆಟ್ಟಿ, ನವೀನ ಹೆಗ್ಡೆ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಪ್ರತಿನಿಧಿ ಕೀರ್ತಿರಾಜ್, ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ಹಾಗೂ ಪ್ರಮುಖರಾದ ಮೋಹನ್ ಕೊಯಿಲ ಉಪಸ್ಥಿತರಿದ್ದರು. ಸಂಘದ ಸಿಬ್ಬಂದಿ ಸುಭಾಸ್ ಬಂಗೇರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *