Breaking
23 Jun 2026, Tue

ಅಡವಿಟ್ಟ ಬಂಗಾರ ಕೇಳಲು ಹೋದವರ ಮೇಲೆ ಫೈರಿಂಗ್: ಬಾಲಕಿ ಸೇರಿ ಮೂವರಿಗೆ ಗಾಯ

ಧಾರವಾಡ: ತಾಲೂಕಿನ ಗರಗ ಗ್ರಾಮದಲ್ಲಿ ಚಿನ್ನಾಭರಣ ವಾಪಸ್ ಕೇಳಲು ಹೋದ ತಂದೆ-ಮಗನ ಮೇಲೆ ಚಿನ್ನದಂಗಡಿ ಮಾಲೀಕ ಗುಂಡು ಹಾರಿಸಿದ ಘಟನೆ ಸೋಮವಾರ ನಡೆದಿದೆ. ಈ ವೇಳೆ ಶಾಲೆಯಿಂದ ಮನೆಗೆ ತೆರಳುತ್ತಿದ್ದ 10 ವರ್ಷದ ಬಾಲಕಿಗೂ ಗುಂಡೇಟು ತಗುಲಿ ಗಾಯಗೊಂಡಿದ್ದಾಳೆ.

ಜೀರಿಗವಾಡ ಗ್ರಾಮದ ನಿಂಗಪ್ಪ ಫಕ್ಕೀರಪ್ಪ ಹೊರಕೇರಿ (66), ಅವರ ಪುತ್ರ ಸಿದ್ದಪ್ಪ ನಿಂಗಪ್ಪ ಹೊರಕೇರಿ (32) ಹಾಗೂ ಗರಗ ಗ್ರಾಮದ ಶ್ರದ್ಧಾ ಪಾಯಪ್ಪನವರ (10) ಗಾಯಗೊಂಡವರು. ಮೂವರಿಗೂ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣದಲ್ಲಿ ಗರಗ ಗ್ರಾಮದ ಜ್ಯುವೆಲರಿ ಅಂಗಡಿ ಮಾಲೀಕ ಮೌನೇಶ ಆರ್. ಬಡಿಗೇರ್ (45) ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ನಿಂಗಪ್ಪ ಅವರು 40 ಗ್ರಾಂ ಚಿನ್ನಾಭರಣವನ್ನು ಅಡವಿಟ್ಟು 60 ಸಾವಿರ ರೂ. ಸಾಲ ಪಡೆದಿದ್ದರು. ಸೋಮವಾರ ಸಾಲದ ಮೊತ್ತವನ್ನು ಬಡ್ಡಿ ಸಮೇತ ಪಾವತಿಸಿ ಚಿನ್ನವನ್ನು ವಾಪಸ್ ಪಡೆಯಲು ಮಗನೊಂದಿಗೆ ಮೌನೇಶನ ಅಂಗಡಿಗೆ ತೆರಳಿದ್ದರು.

ಈ ವೇಳೆ ಚಿನ್ನ ಹಿಂತಿರುಗಿಸುವ ವಿಚಾರದಲ್ಲಿ ಮಾತಿನ ಚಕಮಕಿ ಉಂಟಾಗಿ ಜಗಳ ತೀವ್ರಗೊಂಡಿದೆ. ಆಕ್ರೋಶಗೊಂಡ ಮೌನೇಶ ತನ್ನ ಬಳಿಯಿದ್ದ ರಿವಾಲ್ವರ್‌ನಿಂದ 5-6 ಸುತ್ತು ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ.

ಗುಂಡಿನ ದಾಳಿಯಲ್ಲಿ ನಿಂಗಪ್ಪ ಅವರ ಬಲ ತೊಡೆಗೆ ಎರಡು ಗುಂಡುಗಳು, ಸಿದ್ದಪ್ಪ ಅವರ ಎಡ ತೊಡೆಗೆ ಎರಡು ಗುಂಡುಗಳು ಹಾಗೂ ಹೊಟ್ಟೆಗೆ ಒಂದು ಗುಂಡು ತಗುಲಿದೆ. ಇದೇ ವೇಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಶ್ರದ್ಧಾಳ ಎಡಗಾಲಿಗೂ ಗುಂಡು ತಗುಲಿದೆ.

ಸದ್ಯ ನಿಂಗಪ್ಪ ಮತ್ತು ಶ್ರದ್ಧಾಳಿಗೆ ಪ್ರಾಣಾಪಾಯ ಇಲ್ಲ. ಸಿದ್ದಪ್ಪನ ಹೊಟ್ಟೆಯಲ್ಲಿ ಒಂದು ಗುಂಡು ಉಳಿದಿದ್ದು ಚಿಕಿತ್ಸೆ ಮುಂದುವರಿದಿದೆ.

ಘಟನೆ ಸಂಬಂಧ ತನಿಖೆ ಮುಂದುವರಿದಿದ್ದು, ಅಗತ್ಯವಿದ್ದರೆ ಇನ್ನಿತರರನ್ನೂ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ತಿಳಿಸಿದ್ದಾರೆ.

Leave a Reply

Your email address will not be published. Required fields are marked *