ಉಡುಪಿ: ತೆಂಕನಿಡಿಯೂರು ಗ್ರಾಮದ ತೊಟ್ಟಂ ಪ್ರದೇಶದಲ್ಲಿರುವ ವಿಶ್ರಮ್ ಹೋಂಸ್ಟೇ ಮೇಲೆ ಮಲ್ಪೆ ಪೊಲೀಸರು ಗುರುವಾರ ನಡೆಸಿದ ದಾಳಿಯಲ್ಲಿ ಮಾದಕ ವಸ್ತುಗಳ ಅಕ್ರಮ ಮಾರಾಟ ಪ್ರಕರಣ ಬೆಳಕಿಗೆ ಬಂದಿದ್ದು, ಮಹಿಳೆ ಸೇರಿ ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿದೆ.

ಉಡುಪಿ ಉಪವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಲ್ಪೆ ವೃತ್ತ ನಿರೀಕ್ಷಕರ ಮಾರ್ಗದರ್ಶನದಲ್ಲಿ, ಹೋಂಸ್ಟೇಯಲ್ಲಿ ಮಾದಕ ವಸ್ತುಗಳನ್ನು ಸಂಗ್ರಹಿಸಿ ಸಾರ್ವಜನಿಕರಿಗೆ ಸರಬರಾಜು ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು. ಪಿಎಸ್ಐ ಅನಿಲ್ ಕುಮಾರ್ ಡಿ ಹಾಗೂ ಪಿಎಸ್ಐ ಗಂಗಪ್ಪ ಎಸ್ ನೇತೃತ್ವದಲ್ಲಿ ದಾಳಿ ನಡೆದಿದೆ.

ದಾಳಿಯ ವೇಳೆ ಎಫ್.ಎಂ. ನಾಜಿಲ್ (31), ಮೊಹಮ್ಮದ್ ಅಜರುದ್ದೀನ್ (42), ಮೊಹಮ್ಮದ್ ಅಫ್ನಾನ್ (19), ವಿಘ್ನೇಶ್ (35) ಅವರನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆಯ ವೇಳೆ ಹೋಂಸ್ಟೇ ಮಾಲೀಕ ಧನ್ವನ್ ರಿಕಿತ್ (36), ಉದ್ಯೋಗಿ ಬಸವರಾಜ್ (36) ಹಾಗೂ ಗೀತಾಂಜಲಿ ಜೆನಾ (44) ಅವರನ್ನೂ ಬಂಧಿಸಲಾಗಿದೆ.

ಪ್ರಾಥಮಿಕ ಪರೀಕ್ಷೆಯಲ್ಲಿ ನಾಜಿಲ್, ಮೊಹಮ್ಮದ್ ಅಜರುದ್ದೀನ್, ಮೊಹಮ್ಮದ್ ಅಫ್ನಾನ್ ಮತ್ತು ವಿಘ್ನೇಶ್ ಅವರು ಮಾದಕ ವಸ್ತು ಸೇವಿಸಿರುವುದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಕ್ಷಿಗಳ ಸಮ್ಮುಖದಲ್ಲಿ ನಡೆದ ಶೋಧದ ವೇಳೆ ಸುಮಾರು ₹3,000 ಮೌಲ್ಯದ 33.81 ಗ್ರಾಂ ಗಾಂಜಾ, ಸುಮಾರು ₹20,000 ಮೌಲ್ಯದ 9.73 ಗ್ರಾಂ ಎಂಡಿಎಂಎ, ಐದು ಮೊಬೈಲ್ ಫೋನ್ಗಳು ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಹಿಂದೆ ಮಲ್ಪೆ ಪೊಲೀಸರು ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಅನಧಿಕೃತ ಕಾರ್ಯಾಚರಣೆ ಕುರಿತು ನೋಟಿಸ್ ನೀಡಲಾಗಿದ್ದರೂ, ಹೋಂಸ್ಟೇ ಕಾನೂನುಬಾಹಿರವಾಗಿ ಮುಂದುವರಿದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಧಿತರನ್ನು ಮುಂದಿನ ಕಾನೂನು ಕ್ರಮಕ್ಕಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿಸಲಾಗಿದೆ.




