ಕಾಪು: ರಾಷ್ಟ್ರೀಯ ಹೆದ್ದಾರಿ 66ರ ಕಾಪು ಸಾಯಿ ಸರ್ವಿಸ್ ಸ್ಟೇಷನ್ ಸಮೀಪ ಇಂದು (ಜೂನ್ 18) ಬೆಳಿಗ್ಗೆ ಎಕ್ಸ್ಪ್ರೆಸ್ ಬಸ್ ಮತ್ತು ಸ್ಕೂಟಿ ನಡುವೆ ಸಂಭವಿಸಿದ ಅಪಘಾತದಲ್ಲಿ ಸ್ಕೂಟಿ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.
ಮಂಗಳೂರಿನಿಂದ ಉಡುಪಿ ಕಡೆಗೆ ಕಾಪು ಸರ್ವಿಸ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ಎಕ್ಸ್ಪ್ರೆಸ್ ಬಸ್, ಹೆದ್ದಾರಿಯಲ್ಲಿ ಸಾಗುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.

ಗಂಭೀರವಾಗಿ ಗಾಯಗೊಂಡ ಸ್ಕೂಟಿ ಸವಾರರನ್ನು ಮಂಗಳೂರು ಸಸಿಹಿತ್ಲು ನಿವಾಸಿ ಹಾಗೂ ಪ್ರಸ್ತುತ ಕಾಪುವಿನಲ್ಲಿ ವಾಸವಿರುವ ಗಣೇಶ್ ಪಾತ್ರಿ ಎಂದು ಗುರುತಿಸಲಾಗಿದೆ.ಅಪಘಾತದ ಬಳಿಕ ಸ್ಥಳೀಯರು ಗಾಯಾಳುವನ್ನು ಆಂಬುಲೆನ್ಸ್ ಮೂಲಕ ಉಡುಪಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಡಿಕ್ಕಿಯ ಬಳಿಕ ಬಸ್ ಡಿವೈಡರ್ ಮೇಲೇರಿಕೊಂಡು ನಿಂತಿದ್ದು, ಇದರಿಂದ ಮತ್ತಷ್ಟು ದೊಡ್ಡ ಅನಾಹುತ ತಪ್ಪಿದಂತಾಗಿದೆ.ಘಟನಾ ಸ್ಥಳಕ್ಕೆ ಕಾಪು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.







