Breaking
18 Jun 2026, Thu

ತೊಕ್ಕೊಟ್ಟಿನಲ್ಲಿ ಸ್ಕೂಟರ್ ಹುಚ್ಚಾಟ: ನಾಲ್ವರು ಯುವತಿಯರ ಜಾಲಿ ರೈಡ್‌ ಅಪಘಾತ, ವೀಡಿಯೋ ವೈರಲ್

ಉಳ್ಳಾಲ: ತೊಕ್ಕೊಟ್ಟು ಒಳಪೇಟೆಯಲ್ಲಿ ನಾಲ್ವರು ಯುವತಿಯರು ಒಂದೇ ಸ್ಕೂಟರ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ಪಾರ್ಕ್ ಮಾಡಲಾಗಿದ್ದ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಘಟನೆ ನಡೆದಿದೆ. ಈ ಘಟನೆಯ ಸಿಸಿಟಿವಿ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನಿನ್ನೆ ರಾತ್ರಿ ಸುಮಾರು 9 ಗಂಟೆ ವೇಳೆಗೆ ಎಬಿಸಿ ಕ್ಲಬ್ ಸಮೀಪ ಈ ಘಟನೆ ಸಂಭವಿಸಿದೆ. ಉಳ್ಳಾಲ ಮೇಲಂಗಡಿಯಿಂದ ಟಿ.ಸಿ.ರೋಡ್ ಮಾರ್ಗವಾಗಿ ತೊಕ್ಕೊಟ್ಟು ಕಡೆಗೆ ಬರುತ್ತಿದ್ದ ಸ್ಕೂಟರ್, ರಸ್ತೆ ಹಂಪ್ಸ್ ದಾಟುವ ವೇಳೆ ಚಾಲಕಿಯ ನಿಯಂತ್ರಣ ತಪ್ಪಿ ಕ್ಲಬ್ ಆವರಣದತ್ತ ನುಗ್ಗಿ ಪಾರ್ಕ್ ಮಾಡಲಾಗಿದ್ದ ದ್ವಿಚಕ್ರ ವಾಹನಗಳಿಗೆ ಢಿಕ್ಕಿ ಹೊಡೆದಿದೆ.

ಹೆಲ್ಮೆಟ್ ಧರಿಸದೆ ನಾಲ್ವರು ಯುವತಿಯರು ಒಂದೇ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದು, ಡಿಕ್ಕಿಯ ಪರಿಣಾಮ ಸ್ಕೂಟರ್‌ನಲ್ಲಿದ್ದವರು ರಸ್ತೆಗೆ ಬಿದ್ದಿದ್ದಾರೆ. ಘಟನೆ ಕಂಡ ಎಬಿಸಿ ಕ್ಲಬ್‌ನಲ್ಲಿದ್ದ ಯುವಕರು ತಕ್ಷಣ ಹೊರಬಂದು ಯುವತಿಯರಿಗೆ ನೆರವು ನೀಡಿದ್ದಾರೆ.

ಮಾಹಿತಿಯ ಪ್ರಕಾರ, ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದವರು ಉಳ್ಳಾಲ ಮೇಲಂಗಡಿಯ ಅಪ್ರಾಪ್ತ ವಯಸ್ಸಿನ ಕಾಲೇಜು ವಿದ್ಯಾರ್ಥಿನಿಯರಾಗಿದ್ದಾರೆ ಎನ್ನಲಾಗಿದೆ. ಅದೃಷ್ಟವಶಾತ್ ಯಾವುದೇ ಗಂಭೀರ ಗಾಯಗಳು ಸಂಭವಿಸಿಲ್ಲ ಹಾಗೂ ಪಾದಚಾರಿಗಳಿಗೂ ಅನಾಹುತವಾಗಿಲ್ಲ.

ಆದರೆ ಅಪಘಾತದಿಂದ ಎಬಿಸಿ ಕ್ಲಬ್ ಸದಸ್ಯರ ಎರಡು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಅಪಾಯಕಾರಿ ರೀತಿಯಲ್ಲಿ ಸವಾರಿ ನಡೆಸಿದ ಯುವತಿಯರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *