ಬಂಟ್ವಾಳ: ತಾಲೂಕಿನ ಬಡಗಬೆಳ್ಳೂರು ಗ್ರಾಮದ ಭಟ್ಟಾಜೆ–ತಾರಬಳಿ ಸಂಪರ್ಕ ಸೇತುವೆ ಕುಸಿದ ಪರಿಣಾಮ ಹಲವು ಗ್ರಾಮಗಳ ಸಂಪರ್ಕ ಕಡಿದು ನೂರಾರು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಳೆಗಾಲ ಆರಂಭವಾಗುತ್ತಿದ್ದಂತೆ ಈಗಾಗಲೇ ಅಪಾಯದ ಸ್ಥಿತಿಯಲ್ಲಿದ್ದ ಈ ಸೇತುವೆ ಸಂಪೂರ್ಣ ಕುಸಿದಿದೆ. ಕಿರಲೆ, ಭಟ್ಟಾಜೆ, ಸೊರ್ನಾಡು, ಎರ್ಮಲಪದವು, ಕುರಿಯಾಳ, ಬಾಳಿಕೆ, ಬಂಡಸಾಲೆ, ಕೊಳತ್ತಮಜಲು, ಬಡಗಬೆಳ್ಳೂರು ಹಾಗೂ ಪೊಳಲಿ ಭಾಗಗಳ ಜನರಿಗೆ ಇದು ಪ್ರಮುಖ ಸಂಪರ್ಕ ಮಾರ್ಗವಾಗಿತ್ತು.

ಕಳೆದ ಕೆಲವು ತಿಂಗಳಿನಿಂದ ಸೇತುವೆಯ ದುಸ್ಥಿತಿ ಹಿನ್ನೆಲೆ ಘನವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದ್ದು, ಲಘು ವಾಹನಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿತ್ತು. ಸ್ಥಳೀಯರ ಒತ್ತಾಯದ ಮೇರೆಗೆ ಇಲಾಖೆ ಬುಲ್ಡೋಜರ್ ಮೂಲಕ ತೆರವು ಕಾರ್ಯ ಆರಂಭಿಸಿದ್ದು, ಫೌಂಡೇಶನ್ ತೆರವು ಸೇರಿ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಕೆಲವು ವಾರಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

ಸೇತುವೆ ಕುಸಿತದಿಂದ ಶಾಲಾ ಮಕ್ಕಳು ಸೇರಿದಂತೆ ಗ್ರಾಮಸ್ಥರು ತೋಡು ದಾಟಿ ಸಂಚರಿಸಬೇಕಾದ ಅಥವಾ ಹಲವು ಕಿಲೋಮೀಟರ್ ಸುತ್ತುಬಳಸಿ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆ ಹೆಚ್ಚಾದರೆ ತೋಡಿನಲ್ಲಿ ನೀರಿನ ಮಟ್ಟ ಏರಿಕೆ ಆಗಿ ಸಂಚಾರ ಇನ್ನಷ್ಟು ಅಪಾಯಕಾರಿಯಾಗುವ ಸಾಧ್ಯತೆ ಇದೆ.
ಹೊಸ ಸೇತುವೆ ನಿರ್ಮಾಣವನ್ನು ತ್ವರಿತಗೊಳಿಸಬೇಕು ಹಾಗೂ ತಾತ್ಕಾಲಿಕ ಪರ್ಯಾಯ ಸಂಪರ್ಕ ವ್ಯವಸ್ಥೆ ಕಲ್ಪಿಸಬೇಕು ಎಂಬ ಆಗ್ರಹವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.






