ಸಿದ್ದಕಟ್ಟೆ: ಕೊರ್ಯಾರು ದೇವಸ್ಥಾನದ ದ್ರಡ ಕಲಸ ಸಂದರ್ಭದಲ್ಲಿ, ರೋಟರಿ ಕ್ಲಬ್ ಸಿದ್ದಕಟ್ಟೆ ಪಲ್ಗುಣಿ ಅಧ್ಯಕ್ಷರಾದ ದುರ್ಗಾದಾಸ್ ಶೆಟ್ಟಿ ಅವರು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಕಟಪಾಡಿ–ಉಳ್ಳಾಲ ಅಬ್ಬಕ್ಕ ಸರ್ಕಲ್ ರಾಜ್ಯ ಹೆದ್ದಾರಿ (ಎಸ್.ಎಚ್. 300)ಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸುವಂತೆ ಮನವಿ ಸಲ್ಲಿಸಿದರು.

ಮನವಿಯಲ್ಲಿ, ಕಟಪಾಡಿಯಿಂದ ಆರಂಭವಾಗಿ ಕಾರ್ಕಳ, ಮೂಡಬಿದ್ರಿ, ಸಿದ್ದಕಟ್ಟೆ, ಬಂಟ್ವಾಳ, ಮೆಲ್ಕಾರ್ ಹಾಗೂ ಮುಡಿಪು ಮಾರ್ಗವಾಗಿ ಉಳ್ಳಾಲ ಅಬ್ಬಕ್ಕ ಸರ್ಕಲ್‌ವರೆಗೆ ಸಂಪರ್ಕ ಕಲ್ಪಿಸುವ ಈ ರಾಜ್ಯ ಹೆದ್ದಾರಿಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತಿವೆ ಎಂದು ವಿವರಿಸಲಾಗಿದೆ. ವಿಶೇಷವಾಗಿ ಬಂಟ್ವಾಳ–ಮೂಡಬಿದ್ರಿ ಭಾಗದಲ್ಲಿ ರಸ್ತೆ ಕಿರಿದಾಗಿದ್ದು, ಅನೇಕ ತಿರುವುಗಳಿಂದ ಕೂಡಿರುವುದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ರಸ್ತೆ ಅಗಲೀಕರಣ ಹಾಗೂ ಮೂಲಸೌಕರ್ಯ ಅಭಿವೃದ್ಧಿಯ ದೃಷ್ಟಿಯಿಂದ ಈ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಘೋಷಿಸುವಂತೆ ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಮನವಿಯನ್ನು ಸ್ವೀಕರಿಸಿ, ಸಂಬಂಧಿತ ಇಲಾಖೆಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕೊರ್ಯಾರು ದೇವಸ್ಥಾನದ ಗುರಿಕಾರ ಗೋಪಾಲ ಗೌಡ, ಸಿದ್ದಕಟ್ಟೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ಸಿದ್ದಕಟ್ಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ, ಸಂಗಬೆಟ್ಟು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸತೀಶ್ ಪೂಜಾರಿ ಅಲಕ್ಕೆ, ಗ್ರಾಮ ಪಂಚಾಯತ್ ಸದಸ್ಯ ದಾಮೋದರ ಪೂಜಾರಿ, ಸಿದ್ದಕಟ್ಟೆ ಸಿ.ಎ. ಬ್ಯಾಂಕ್ ನಿರ್ದೇಶಕ ನವೀನ ಹೆಗ್ಡೆ, ಮಾಜಿ ನಿರ್ದೇಶಕ ದೇವುರಾಜ್ ಸಾಲಿಯಾನ್ ಹಾಗೂ ಪ್ರಮುಖರಾದ ಹೇಮಚಂದ್ರ ಗೌಡ, ರಾಮಕೃಷ್ಣ ನಾಯಕ್ ಕಿನ್ನಾಜೆ, ಚಂದ್ರಶೇಖರ ಪುವಳ ಕರ್ಪೆ, ಗಂಗಾಧರ್ ಗೌಡ, ಉಮೇಶ್ ಗೌಡ, ಕರುಣಾ ಮಂಚಕಲ್ಲು, ಸದಾನಂದ ಕುಲಾಲ್ ಮತ್ತು ಡಾಕಯ ಗೌಡ ಉಪಸ್ಥಿತರಿದ್ದರು.


