Breaking
2 Aug 2026, Sun

ಧರ್ಮಸ್ಥಳದಿಂದ ವಾಪಸ್ ಬರುತ್ತಿದ್ದ ಮೂವರು ಯುವಕರು ಹೇಮಾವತಿ ಹಿನ್ನೀರಿನಲ್ಲಿ ಮುಳುಗಿ ಸಾವು

ಹಾಸನ: ಧರ್ಮಸ್ಥಳ ತೀರ್ಥಯಾತ್ರೆ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದ ಮೂವರು ಯುವಕರು ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ಹಾಸನ ತಾಲೂಕಿನ ಶೆಟ್ಟಿಹಳ್ಳಿ ಚರ್ಚ್ ಸಮೀಪ ಭಾನುವಾರ ಸಂಜೆ ನಡೆದಿದೆ.

ಮೃತರನ್ನು ಬೆಂಗಳೂರಿನ ಗಿರಿನಗರ ನಿವಾಸಿಗಳಾದ ಚರಣ್ (20), ಮಿಲನ್ (23) ಹಾಗೂ ಬ್ಯಾಟರಾಯನಪುರದ ಮಣಿಕಂಠ (20) ಎಂದು ಗುರುತಿಸಲಾಗಿದೆ.

ಬೆಂಗಳೂರಿನ ವಿವಿಧ ಪ್ರದೇಶಗಳ 10 ಮಂದಿ ಸ್ನೇಹಿತರು ಟೆಂಪೋ ಟ್ರಾವೆಲರ್‌ನಲ್ಲಿ ಧರ್ಮಸ್ಥಳಕ್ಕೆ ತೆರಳಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ವಾಪಸ್ ಬರುತ್ತಿದ್ದರು. ಈ ವೇಳೆ ಹಾಸನದ ಸಮೀಪದ ಐತಿಹಾಸಿಕ ಶೆಟ್ಟಿಹಳ್ಳಿ ಚರ್ಚ್ ವೀಕ್ಷಣೆಗೆ ತೆರಳಿದ್ದರು.

ಚರ್ಚ್ ಸುತ್ತಲಿನ ಹೇಮಾವತಿ ಜಲಾಶಯದ ಹಿನ್ನೀರಿನಲ್ಲಿ ಈಜಲು ಇಳಿದ ಮೂವರು ಯುವಕರು ನೀರಿನ ಆಳ ಮತ್ತು ಸುಳಿಯ ಬಗ್ಗೆ ಅರಿವಿಲ್ಲದೆ ಮುಳುಗಿದ್ದಾರೆ. ಅವರನ್ನು ಉಳಿಸಲು ಸ್ನೇಹಿತರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಸ್ಥಳೀಯರು ಹಾಗೂ ರಕ್ಷಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಮೂವರೂ ನೀರಿನಲ್ಲಿ ಕಣ್ಮರೆಯಾಗಿದ್ದರು.

ಮಾಹಿತಿ ತಿಳಿದ ಗೊರೂರು ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿ ಸಂಜೆ ವೇಳೆಗೆ ಮೃತದೇಹಗಳನ್ನು ಹೊರತೆಗೆದರು. ಬಳಿಕ ಮರಣೋತ್ತರ ಪರೀಕ್ಷೆಗಾಗಿ ಹಾಸನ ಹಿಮ್ಸ್ ಆಸ್ಪತ್ರೆಗೆ ರವಾನಿಸಲಾಯಿತು.

ಮೃತ ಯುವಕರಿಗೆ ಈಜು ಬಾರದಿದ್ದು, ನೀರಿನ ಆಳದ ಅರಿವಿಲ್ಲದೇ ನೀರಿಗೆ ಇಳಿದಿರುವುದೇ ದುರಂತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ಈ ಘಟನೆ ಪ್ರವಾಸಿ ತಾಣಗಳು ಹಾಗೂ ಜಲಾಶಯ ಪ್ರದೇಶಗಳಲ್ಲಿ ಸುರಕ್ಷತಾ ಕ್ರಮಗಳ ಅಗತ್ಯತೆಯನ್ನು ಮತ್ತೊಮ್ಮೆ ನೆನಪಿಸಿದೆ.

Leave a Reply

Your email address will not be published. Required fields are marked *