ಬಂಟ್ವಾಳ: ಹಿರಿಯ ಪತ್ರಕರ್ತರು ಹಾಗೂ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಕೆ. ಬಾಲಕೃಷ್ಣ ಗಟ್ಟಿ ಅವರು ನಿಧನರಾದರು. ಮೂಲತಃ ಕಾಸರಗೋಡು ಜಿಲ್ಲೆಯವರಾದ ಅವರು ಬಂಟ್ವಾಳದ ಎಸ್‌ವಿಎಸ್ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ಬಳಿಕ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರ ಮಂಗಳೂರಿನಲ್ಲಿ ನೆಲೆಸಿದ್ದರು.

ಪತ್ರಿಕೋದ್ಯಮ ಕ್ಷೇತ್ರದಲ್ಲಿಯೂ ವಿಶಿಷ್ಟ ಛಾಪು ಮೂಡಿಸಿದ್ದ ಅವರು ಪ್ರಜಾವಾಣಿ ಹಾಗೂ ಡಕ್ಕನ್ ಹೆರಾಲ್ಡ್ ಪತ್ರಿಕೆಗಳ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದರು. ಬಳಿಕ ನೇತ್ರಾವತಿ ವಾರ್ತೆ ದಿನಪತ್ರಿಕೆಯನ್ನು ಆರಂಭಿಸಿ ಅನೇಕ ಯುವ ಪತ್ರಕರ್ತರಿಗೆ ಮಾರ್ಗದರ್ಶನ ನೀಡಿದ್ದರು. ಜನವಾಹಿನಿ ದಿನಪತ್ರಿಕೆಯ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿ ಪತ್ರಿಕೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.

ಸರಳ, ನೇರ ಹಾಗೂ ನಿಷ್ಠುರ ಬರವಣಿಗೆಯ ಮೂಲಕ ಪತ್ರಿಕಾರಂಗದಲ್ಲಿ ಹಲವು ದಶಕಗಳ ಕಾಲ ಗುರುತಿಸಿಕೊಂಡಿದ್ದ ಅವರು, ಬಂಟ್ವಾಳ ತಾಲೂಕು ಗ್ರಾಮೀಣ ಪತ್ರಕರ್ತರ ಸಂಘದ ಸ್ಥಾಪಕರಲ್ಲಿ ಒಬ್ಬರಾಗಿದ್ದು, ಸಂಘದ ಸ್ಥಾಪಕಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಉತ್ತಮ ವಾಗ್ಮಿಯಾಗಿದ್ದ ಪ್ರೊ. ಗಟ್ಟಿ ಅವರು ಎಡಪಂಥೀಯ ಚಿಂತನೆಗಳಿಂದ ಆಕರ್ಷಿತರಾಗಿದ್ದರು. 2024ರ ನವೆಂಬರ್ 12 ಮತ್ತು 13ರಂದು ಬಂಟ್ವಾಳ ತಾಲೂಕಿನಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.






