ಶಿವಮೊಗ್ಗ : ರಾಷ್ಟ್ರೀಯ ಹೆದ್ದಾರಿ 169ಎರ ಆಗುಂಬೆ ಘಾಟಿಯಲ್ಲಿ ಜಲ್ಲಿ ಹಾಗೂ ಸರಕು ಸಾಗಣೆ ಸೇರಿದಂತೆ ಭಾರಿ ವಾಹನಗಳ ಸಂಚಾರವನ್ನು ಜೂನ್ 15ರಿಂದ ಮಳೆಗಾಲ ಮುಗಿಯುವವರೆಗೆ ನಿಷೇಧಿಸಿ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶ ಹೊರಡಿಸಿದ್ದಾರೆ.

ಹುಲಿಕಲ್ ಘಾಟಿಯಲ್ಲಿ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಅಲ್ಲಿ ತಾತ್ಕಾಲಿಕ ರಕ್ಷಣಾತ್ಮಕ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಇದರಿಂದ ಶಿವಮೊಗ್ಗ-ಉಡುಪಿ ಸಂಪರ್ಕಕ್ಕೆ ಆಗುಂಬೆ ಘಾಟಿಯಲ್ಲೇ ಭಾರಿ ವಾಹನಗಳ ಓಡಾಟ ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ರಸ್ತೆ ಬದಿಯ ಭೂಕುಸಿತ, ಅಪಘಾತ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ವಿಶೇಷವಾಗಿ ಚಿಕಿತ್ಸೆಗಾಗಿ ಮಣಿಪಾಲ್, ಉಡುಪಿ ಹಾಗೂ ಮಂಗಳೂರು ಕಡೆಗೆ ಸಂಚರಿಸುವ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಗಳ ನಾಗರಿಕರಿಗೆ ತೊಂದರೆಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ.

ಆಗುಂಬೆ ಘಾಟ್ ಬದಲಾಗಿ ಪರ್ಯಾಯ ಮಾರ್ಗಗಳು ತೀರ್ಥಹಳ್ಳಿಯಿಂದ ಉಡುಪಿ ಕಡೆಗೆ ಹೋಗುವ ವಾಹನಗಳು ತೀರ್ಥಹಳ್ಳಿ – ನಗರ- ನಾಗೋಡಿ – ಕೊಲ್ಲೂರು – ಕುಂದಾಪುರ – ಉಡುಪಿ ಹಾಗೂ ತೀರ್ಥಹಳ್ಳಿ – ಶೃಂಗೇರಿ – ಕೆರೆಕಟ್ಟೆ – ಬಜಗೋಳಿ – ಕಾರ್ಕಳ – ಉಡುಪಿ ಮಾರ್ಗವಾಗಿ ಸಂಚರಿಸುವುದು.
ಉಡುಪಿಯಿಂದ ತೀರ್ಥಹಳ್ಳಿ ಕಡೆಗೆ ಹೋಗುವ ವಾಹನಗಳು ಉಡುಪಿ – ಕುಂದಾಪುರ – ಕೊಲ್ಲೂರು – ನಾಗೋಡಿ – ನಗರ – ತೀರ್ಥಹಳ್ಳಿ ಹಾಗೂ ಕಾರ್ಕಳ – ಬಜಗೋಳಿ – ಕೆರೆಕಟ್ಟೆ – ಶೃಂಗೇರಿ – ತೀರ್ಥಹಳ್ಳಿ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿದೆ.





