ರಾಣಿಬೆನ್ನೂರು: ಬ್ರೇಕ್ ಬದಲು ತಪ್ಪಾಗಿ ಎಕ್ಸಿಲೇಟರ್ ಒತ್ತಿದ ಪರಿಣಾಮ ಕಾರು ವ್ಯಕ್ತಿಯ ಮೇಲೆ ಹರಿದು, ಅವರು ಮೃತಪಟ್ಟಿರುವ ದುರ್ಘಟನೆ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ಚೌಡಯ್ಯದಾನಪುರ ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.
ಮೃತರನ್ನು ಹಾವೇರಿ ತಾಲೂಕಿನ ಗುತ್ತಲ ಪಟ್ಟಣದ ನಿವಾಸಿ ಅಜ್ಜಪ್ಪ ಶಿವಪ್ಪ ಕಳಸಣ್ಣನವರ (40) ಎಂದು ಗುರುತಿಸಲಾಗಿದೆ. ಅವರು ವಿದ್ಯುತ್ ಗುತ್ತಿಗೆದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಮಾಹಿತಿಯ ಪ್ರಕಾರ, ಬೆಂಗಳೂರಿನ ಸುಜಾತಾ ಕೆ.ಎಂ. ಅವರ ಜಮೀನಿನಲ್ಲಿ ವಿದ್ಯುತ್ ಪರಿವರ್ತಕ (ಟ್ರಾನ್ಸ್ಫಾರ್ಮರ್) ಸಂಬಂಧಿತ ಕೆಲಸ ನಡೆಯುತ್ತಿದ್ದು, ಅಜ್ಜಪ್ಪ ಅಲ್ಲೇ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಸುಜಾತಾ, ಅಜ್ಜಪ್ಪ ಅವರೊಂದಿಗೆ ಮಾತನಾಡಲು ವಾಹನ ನಿಲ್ಲಿಸಲು ಮುಂದಾಗಿದ್ದಾರೆ. ಆದರೆ ಬ್ರೇಕ್ ಬದಲು ತಪ್ಪಾಗಿ ಎಕ್ಸಿಲೇಟರ್ ಒತ್ತಿದ ಪರಿಣಾಮ ಕಾರು ವೇಗವಾಗಿ ಮುಂದೆ ಚಲಿಸಿ, ಎದುರು ನಿಂತಿದ್ದ ಅಜ್ಜಪ್ಪ ಅವರ ಮೇಲೆ ಹರಿದಿದೆ.

ಗಂಭೀರವಾಗಿ ಗಾಯಗೊಂಡ ಅಜ್ಜಪ್ಪ ಅವರನ್ನು ತಕ್ಷಣ ಚಿಕಿತ್ಸೆಗಾಗಿ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.






