ಬಂಟ್ವಾಳ : ಸಾಮಾಜಿಕ ಜಾಲತಾಣದಲ್ಲಿ ಬಿಲ್ಲವ ಸಮಾಜದ ಕುರಿತು ಅವಹೇಳನಕಾರಿ ಪದಗಳನ್ನು ಬಳಸಿ ಕೀಳಾಗಿ ಮಾತನಾಡಿರುವ ಮಹಿಳೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಹಾಗೂ ವಿವಿಧ ಬಿಲ್ಲವ ಸಂಘಟನೆಗಳ ವತಿಯಿಂದ ಸೋಮವಾರ ಬಂಟ್ವಾಳ ತಹಸೀಲ್ದಾರ್ ಮತ್ತು ಡಿವೈಎಸ್ಪಿ ಕಚೇರಿಗೆ ಮನವಿ ಸಲ್ಲಿಸಲಾಯಿತು.

ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚಿನಡ್ಕ ಅವರ ನೇತೃತ್ವದಲ್ಲಿ ತಾಲೂಕಿನ ವಿವಿಧ ಬಿಲ್ಲವ ಸಂಘಗಳ ಪ್ರತಿನಿಧಿಗಳು ತಾಲೂಕು ಕಚೇರಿಯಲ್ಲಿ ಸೇರಿ ಖಂಡನಾ ನಿರ್ಣಯ ಮಂಡಿಸಿದರು. ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಅವರು ವಿಷಯದ ಕುರಿತು ಹಕ್ಕೊತ್ತಾಯ ಮಂಡಿಸಿದ ಬಳಿಕ ತಹಸೀಲ್ದಾರ್ ಮಂಜುನಾಥ್ ಅವರಿಗೆ ಮನವಿ ಸಲ್ಲಿಸಲಾಯಿತು. ನಂತರ ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧಿಕಾರಿ ಯಶ್ ಕುಮಾರ್ ಶರ್ಮಾ ಅವರಿಗೂ ಮನವಿ ನೀಡಿ, ಸಮಾಜದ ಭಾವನೆಗಳಿಗೆ ಧಕ್ಕೆ ಉಂಟುಮಾಡಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಬೂಡದ ಅಧ್ಯಕ್ಷ ಬೇಬಿ ಕುಂದರ್, ಸಂಘದ ಮಾಜಿ ಅಧ್ಯಕ್ಷರಾದ ರಾಮಪ್ಪ ಪೂಜಾರಿ ಹಾಗೂ ಸಂಜೀವ ಪೂಜಾರಿ ಗುರುಕೃಪಾ, ಉಪಾಧ್ಯಕ್ಷ ಜಯಪ್ರಕಾಶ್ ಜೆ.ಎಸ್., ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಪೂಜಾರಿ ಮೆಲ್ಕಾರ್, ಜತೆ ಕಾರ್ಯದರ್ಶಿ ಆನಂದ ಸಾಲ್ಯಾನ್, ಕೋಶಾಧಿಕಾರಿ ಸುನೀಲ್ ಕುಂದರ್, ಲೆಕ್ಕಪರಿಶೋಧಕ ಪ್ರಶಾಂತ್ ಕೋಟ್ಯಾನ್, ಯುವವಾಹಿನಿ ಬಂಟ್ವಾಳ ಘಟಕದ ನಿಯೋಜಿತ ಅಧ್ಯಕ್ಷ ಕಿರಣ್ ರಾಜ್ ಪೂಂಜೆರೆಕೋಡಿ, ತಾಲೂಕು ಮಹಿಳಾ ಸಮಿತಿ ಅಧ್ಯಕ್ಷೆ ರಾಗಿಣಿ ಮಾಧವ, ಉದ್ಯಮಿ ಪ್ರಕಾಶ್ ಅಂಚನ್, ಕಾರಿಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವೀರೇಂದ್ರ ಅಮೀನ್, ಸಿದ್ದಕಟ್ಟೆ ಬಿಲ್ಲವ ಸಂಘದ ಅಧ್ಯಕ್ಷ ಕಿರಣ್ ಕುಮಾರ್ ಮಂಜಿಲ ಸೇರಿದಂತೆ ವಿವಿಧ ಬಿಲ್ಲವ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ದಿನೇಶ್ ಸುವರ್ಣ ರಾಯಿ ನಿರೂಪಿಸಿದರು.








